ADVERTISEMENT

ಯುಪಿಎ ಎಂಬುದೀಗ ಉಳಿದಿಲ್ಲ: ಶರದ್‌ ಪವಾರ್‌ ಭೇಟಿ ಬಳಿಕ ಮಮತಾ ಬ್ಯಾನರ್ಜಿ

ಐಎಎನ್ಎಸ್
Published 1 ಡಿಸೆಂಬರ್ 2021, 19:17 IST
Last Updated 1 ಡಿಸೆಂಬರ್ 2021, 19:17 IST
ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ನಿವಾಸದಲ್ಲಿ ಅವರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿಯಾದರು ಪಿಟಿಐ ಚಿತ್ರ
ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ನಿವಾಸದಲ್ಲಿ ಅವರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿಯಾದರು ಪಿಟಿಐ ಚಿತ್ರ   

ಮುಂಬೈ: ರಾಷ್ಟ್ರದಲ್ಲಿ ಯುಪಿಎ ಎಂಬುದೀಗ ಉಳಿದಿಲ್ಲ ಎಂಬ ಹೇಳಿಕೆಯನ್ನು ನೀಡುವ ಮೂಲಕ ತೃಣಮೂಲ ಕಾಂಗ್ರೆಸ್‌ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರೋಧಿ ಬಣಗಳಲ್ಲಿ ಕಾಂಗ್ರೆಸ್‌ ಅನ್ನು ಕಡೆಗಣಿಸುವ ಮುನ್ಸೂಚನೆ ನೀಡಿದ್ದಾರೆ.

'ರಾಷ್ಟ್ರದಲ್ಲಿ ಯುಪಿಎ ಉಳಿದಿಲ್ಲ. ಆದರೆ 2024 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಸಮಾನ ಮನಸ್ಕ ಪ್ರತಿಪಕ್ಷಗಳನ್ನು ಒಟ್ಟುಗೂಡಲು ಕರೆ ನೀಡಲಾಗಿದೆ' ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷ (ಎನ್‌ಸಿಪಿ) ಅಧ್ಯಕ್ಷ ಶರದ್‌ ಪವಾರ್‌ ಅವರನ್ನು ಬುಧವಾರ ಭೇಟಿ ಮಾಡಿ ಚರ್ಚೆ ನಡೆಸಿದ ಮಮತಾ ಬ್ಯಾನರ್ಜಿ, ಬಿಜೆಪಿಯನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎದುರಿಸುವ ನಿಟ್ಟಿನಲ್ಲಿ ಪ್ರತಿಪಕ್ಷಗಳ ಒಟ್ಟುಗೂಡುವಿಕೆಗೆ ಸಂಬಂಧಿಸಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ADVERTISEMENT

ಪಕ್ಷದ ಹಿರಿಯ ಮುಖಂಡರ ಜೊತೆ ಶರದ್‌ ಪವಾರ್‌ ಅವರು ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತ, 'ಬಿಜೆಪಿ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಈ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಾಪಾಡಲು ಮತ್ತು ಜನ ಸಾಮಾನ್ಯರ ಏಳ್ಗೆಗೆ ಹೋರಾಡಲು ಪ್ರಯತ್ನಿಸುತ್ತೇವೆ' ಎಂದರು.

'ರಾಷ್ಟ್ರದಲ್ಲಿ ಸಕ್ರಿಯವಾಗಿರುವ ನಿರಂಕುಶ ಪ್ರಭುತ್ವದ ವಿರುದ್ಧ ಯಾರೂ ಹೋರಾಡುತ್ತಿಲ್ಲ ಎಂಬ ಜನರ ಭಾವನೆಗಳಿಗೆ ಸ್ಪಂದಿಸುವ ಭಾಗವಾಗಿ ಪರ್ಯಾಯ ವ್ಯವಸ್ಥೆಯನ್ನು ತರಬೇಕಿದೆ. ಶರದ್‌ ಜೀ ಅವರು ಬಹಳ ಹಿರಿಯ ನಾಯಕರಲ್ಲಿ ಒಬ್ಬರು. ನಮ್ಮ ರಾಜಕೀಯ ಕಾರ್ಯತಂತ್ರಗಳನ್ನು ಅವರ ಜೊತೆ ಚರ್ಚಿಸಿದ್ದೇವೆ. ಶರದ್‌ ಜೀ ಹೇಳುವ ಮಾತುಗಳಿಗೆಲ್ಲ ಸಮ್ಮತಿ ಇದೆ. ಬಿಜೆಪಿ ವಿರುದ್ಧ ಹೋರಾಡುತ್ತಿರುವ ಶಿವಸೇನೆ ಪ್ರಬಲ ಪ್ರಾದೇಶಿಕ ಪಕ್ಷ. ಅಂತಹ ಎಲ್ಲ ಪಕ್ಷಗಳುಒಗ್ಗಟ್ಟಿನಿಂದ ಕೇಸರಿ ಪಕ್ಷದ ವಿರುದ್ಧ 2024ರ ಚುನಾವಣೆಗಳಲ್ಲಿ ಸೆಣಸಬೇಕಿದೆ.' ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

2021ರ ಏಪ್ರಿಲ್‌-ಮೇ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಅಮೋಘ ಜಯ ಸಾಧಿಸಿದ ಮಮತಾ ಬ್ಯಾನರ್ಜಿ ಅವರನ್ನು ಶ್ಲಾಘಿಸಿದ ಶರದ್‌ ಪವಾರ್‌, '2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿ ಮಮತಾ ಅವರ ಆಶಯ ಬಹಳ ಸ್ಪಷ್ಟವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ಸಮಾನ ಮನಸ್ಕ ಶಕ್ತಿಗಳು ರಾಷ್ಟ್ರೀಯ ಮಟ್ಟದಲ್ಲಿ ಒಗ್ಗೂಡಬೇಕು. ಬಿಜೆಪಿಯನ್ನು ಕಟ್ಟಿ ಹಾಕಲು ಒಟ್ಟಾಗಿ ಕೆಲಸ ಮಾಡಬೇಕು' ಎಂದರು.

ಶಿವಸೇನಾ ಸಂಸದ ಸಂಜಯ್‌ ರಾವುತ್‌ ಅವರು ಪ್ರವಾಸೋದ್ಯಮ ಮಂತ್ರಿ ಆದಿತ್ಯ ಠಾಕ್ರೆ ಅವರ ಜೊತೆ ಮಂಗಳವಾರ ರಾತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದರು. 'ಪಶ್ಚಿಮ ಬಂಗಾಳದಲ್ಲಿ ಮಮತಾ ಅವರು ಐತಿಹಾಸಿಕ ಜಯ ಸಾಧಿಸಿದರು. ಕೇವಲ ಬಿಜೆಪಿಯನ್ನು ಮಾತ್ರವಲ್ಲ, ಎಡಪಕ್ಷಗಳು ಹಾಗೂ ಕಾಂಗ್ರೆಸ್‌ ಅನ್ನು ಗುಡಿಸಿ ಹಾಕಿದರು. ತೃಣಮೂಲ ಕಾಂಗ್ರೆಸ್‌ ಅನ್ನು ತೊರೆದು ಬಿಜೆಪಿ ಸೇರಿದ್ದವರೆಲ್ಲ ವಾಪಸ್‌ ಬರುತ್ತಿದ್ದಾರೆ' ಎಂದು ರಾವುತ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.