ADVERTISEMENT

ಅಪಘಾತ: ಅಪಹರಣಕ್ಕೊಳಗಾದ ಬಾಲಕಿ ರಕ್ಷಿಸಲು ಹೋದ ಮೂವರು ಪೊಲೀಸರು ಸೇರಿ ಐವರು ಸಾವು

ಪಿಟಿಐ
Published 3 ಡಿಸೆಂಬರ್ 2021, 8:27 IST
Last Updated 3 ಡಿಸೆಂಬರ್ 2021, 8:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಭೋಪಾಲ್: ಅಪಹರಣಕ್ಕೊಳಗಾಗಿದ್ದ ಬಾಲಕಿಯನ್ನು ರಕ್ಷಿಸಲು ಎಸ್‌ಯುವಿನಲ್ಲಿ ಹರಿಯಾಣಕ್ಕೆ ತೆರಳುತ್ತಿದ್ದ ಮೂವರು ಪೊಲೀಸರು ಸೇರಿ ಐವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಥುರಾ ಸಮೀಪದ ಯುಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಅಪಘಾತದಲ್ಲಿ ಮೃತಪಟ್ಟ ಪೊಲೀಸರು ಮಧ್ಯಪ್ರದೇಶದ ಟಿಕಾಮ್‌ಗಡದ ಬುದೇರಾ ಪೊಲೀಸ್ ಠಾಣೆಗೆ ಸೇರಿದವರು.

ಘಟನೆಯಲ್ಲಿ ಹೆಡ್‌ಕಾನ್ಸ್‌ಟೇಬಲ್ ಸೇರಿದಂತೆ ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನು ಮಥುರಾದ ಆಸ್ಪತ್ರೆಗೆ ಸೇರಿಸಲಾಗಿದೆ' ಎಂದು ತಿಳಿಸಿದ್ದಾರೆ. ಗಾಯಾಳುಗಳನ್ನು ಹೆಡ್‌ಕಾನ್‌ಸ್ಟೇಬಲ್ ರಥಿ ರಾಮ್, ಎಸ್‌ಯುವಿ ಚಾಲಕ ಜಗದೀಶ್ ಲೋಧಿ ಮತ್ತು ರವಿ ರಾಯ್ಕ್‌ವಾರ್ ಎಂದು ಗುರುತಿಸಲಾಗಿದೆ.

ADVERTISEMENT

'ಪೊಲೀಸರ ತಂಡ ಹರಿಯಾಣಕ್ಕೆ ತೆರಳುತ್ತಿದ್ದ ವೇಳೆ ಟಿಕಾಮ್‌ಗಡದ ಸಮೀಪ ರಸ್ತೆ ವಿಭಜಕಕ್ಕೆ ವಾಹನ ಡಿಕ್ಕಿ ಹೊಡೆದಿದೆ. ಮೃತರನ್ನು ಹೆಡ್‌ಕಾನ್ಸ್‌ಟೇಬಲ್ ಭವಾನಿ ಪ್ರಸಾದ್ (52), ಕಾನ್ಸ್‌ಟೇಬಲ್‌ಗಳಾದ ಹೀರಾ ದೇವಿ ಪ್ರಜಾಪತಿ (32), ಕಮಲೇಂದ್ರ ಯಾದವ್ (28) ಎಂದು ಗುರುತಿಸಲಾಗಿದೆ' ಎಂದು ಟಿಕಾಮ್‌ಗಡದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಲ್. ಚೌರಾಸಿಯಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

'ಟಿಕಾಮ್‌ಗಡದಿಂದ ಅಪಹರಣಕ್ಕೊಳಗಾದ ಬಾಲಕಿಯ ರಕ್ಷಣಾ ಕಾರ್ಯಕ್ಕೆ ನೆರವಾಗಲೆಂದು ಉತ್ತರ ಪ್ರದೇಶದಿಂದ ಕರೆತಂದಿದ್ದ ಪ್ರೀತಿ ಮತ್ತು ಧರ್ಮೇಂದ್ರ ಎಂಬುವವರು ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ' ಎಂದು ಎಎಸ್‌ಪಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.