ADVERTISEMENT

ಮಹಾರಾಷ್ಟ್ರ: ಸರ್ಕಾರ ರಚನೆಯ ಮೂರು ಸಾಧ್ಯತೆಗಳು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 10:47 IST
Last Updated 24 ಅಕ್ಟೋಬರ್ 2019, 10:47 IST
   

ಮುಂಬೈ: ಮಹಾರಾಷ್ಟ್ರದ ಫಲಿತಾಂಶದ ಟ್ರೆಂಡ್‌ ಗಮನಿಸಿದರೆ, ಯಾವುದೇ ಪಕ್ಷಕ್ಕೂ ಸಂಪೂರ್ಣ ಬಹುಮತ ದೊರೆಯುವಂತೆ ಕಾಣುತ್ತಿಲ್ಲ. ಪಕ್ಷಗಳ ಗೆಲುವು ಹಾಗೂ ಮುನ್ನಡೆ ಗಮನಿಸಿದಾಗ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಮೂರು ಸಾಧ್ಯತೆಗಳನ್ನು ಊಹಿಸಬಹುದು. ಮೊದಲ ಸಾಧ್ಯತೆ ಎಂದರೆ ಚುನಾವಣಾ ಪೂರ್ಣ ಮೈತ್ರಿಯಂತೆಯೇ ಶಿವಸೇನಾ ಹಾಗೂ ಬಿಜೆಪಿ ಸರ್ಕಾರ ರಚಿಸಬಹುದು. ಇಲ್ಲವೇ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಬಹುದು. ಕೊನೆಯ ಹಾಗೂ ಅಚ್ಚರಿಯ ಸಾಧ್ಯತೆ ಎಂದರೆ, ಎನ್‌ಸಿಪಿ ಮತ್ತು ಬಿಜೆಪಿ ಮೈತ್ರಿಗೊಂಡು ಸರ್ಕಾರ ರಚಿಸುವ ಸಂದರ್ಭವೂ ಬರಬಹುದು.

ಮಧ್ಯಾಹ್ನ 1 ಗಂಟೆಯ ಫಲಿತಾಂಶದ ಪ್ರಕಾರ ಬಿಜೆಪಿ ಮತ್ತು ಶಿವಸೇನಾ ಮೈತ್ರಿಯು ಬಹುಮತದ ಸಂಖ್ಯೆಯನ್ನು ಮೀರಿ 161 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಬಿಜೆಪಿ 99 ಸ್ಥಾನಗಳಲ್ಲಿ ಮುನ್ನಡೆಯಿದ್ದರೆ, ಸೇನಾ 58 ‌ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಅಧಿಕಾರಕ್ಕಾಗಿ ಚೌಕಾಸಿ ಮಾಡುವುದಕ್ಕೆ ಸಾಕಷ್ಟು ಅವಕಾಶಗಳು ಇಲ್ಲಿವೆ. 2014ರ ಚುನಾವಣೆಯಲ್ಲಿ ಬಿಜೆಪಿ 122 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.

ಎರಡನೇ ಸಾಧ್ಯತೆಯ ಪ್ರಕಾರ ಕಾಂಗ್ರೆಸ್‌ ಆದ್ಯತೆ ನೀಡುವ ಎನ್‌ಸಿಪಿ–ಕಾಂಗ್ರೆಸ್‌–ಸೇನಾ ಮೈತ್ರಿ. ಶರದ್‌ ಪವರ್‌ ನೇತೃತ್ವದ ಎನ್‌ಸಿಪಿ ಕಳೆದ ಚುನಾವಣೆಗಿಂತ ಹೆಚ್ಚು ಸ್ಥಾನಗಳಿಸುವಲ್ಲಿ ಸಫಲವಾಗಿದೆ. 2014ರಲ್ಲಿ 41 ಸ್ಥಾನಗಳನ್ನು ಗಳಿಸಿದ್ದ ಎನ್‌ಸಿಪಿ ಈಗ 56 ಕ್ಷೇತ್ರಗಳಲ್ಲಿ ಗೆಲುವು ಪಡೆಯುವತ್ತಾ ಸಾಗಿದೆ. ಆದರೆ, ಕಾಂಗ್ರೆಸ್‌ ಕಳೆದ ಚುನಾವಣೆಗಿಂತ ಕೆಳಗಿಳಿದಿದೆ. 42ರಲ್ಲಿ ಗೆದಿದ್ದ ಕಾಂಗ್ರೆಸ್‌ ಈಗ 37 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.

ADVERTISEMENT

ಅಧಿಕಾರಕ್ಕೆ ಶಿವಸೇನಾ ಹೆಚ್ಚಿನ ಬೇಡಿಕೆಗಳನ್ನು ಬಿಜೆಪಿ ಎದುರು ಇಟ್ಟಿದ್ದೇ ಆದಲ್ಲಿ, ಬಿಜೆಪಿಯು ಶಿವಸೇನಾದ ಮೈತ್ರಿಯನ್ನು ಬಿಟ್ಟು ಎನ್‌ಸಿಪಿಯೊಂದಿಗೆ ಕೈ ಜೋಡಿಸಿ ಸರ್ಕಾರ ರಚಿಸುವ ಸಾಧ್ಯತೆಯೂ ಇದೆ. ‘ಶದರ್‌ ಪವಾರ್‌ ಚತುರ ರಾಜಕಾರಣಿ ಹಾಗೂ ತಮ್ಮ ರಾಜಕೀಯ ಜೀವನದಲ್ಲಿ ಅನೇಕ ಮೈತ್ರಿ ಸರ್ಕಾರಗಳನ್ನು ಕಂಡಿದ್ದಾರೆ. ಸೇನಾ ಬಹಳ ಬೇಡಿಕೆ ಇಟ್ಟರೆ, ಎನ್‌ಸಿಪಿ–ಬಿಜೆಪಿ ಮೈತ್ರಿ ರಚನೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವ ಹಾಗಿಲ್ಲ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.