ADVERTISEMENT

ಅಮೃತಸರ| ಊಟದ ಡಬ್ಬಿ ಬಾಂಬ್‌ ಪತ್ತೆ: ಪಾಕ್‌ನಿಂದ ಡ್ರೋನ್‌ನಲ್ಲಿ ಬಂದಿರುವ ಶಂಕೆ

ಪಿಟಿಐ
Published 9 ಆಗಸ್ಟ್ 2021, 9:59 IST
Last Updated 9 ಆಗಸ್ಟ್ 2021, 9:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಅಮೃತಸರ (ಪಂಜಾಬ್‌): ಅಮೃತಸರದ ಹಳ್ಳಿಯಲ್ಲಿ 2 ಕೆ.ಜಿಯಷ್ಟು ಆರ್‌ಡಿಎಕ್ಸ್‌ ತುಂಬಿದ್ದ ಊಟದ ಡಬ್ಬಿಯೊಂದು ಪತ್ತೆಯಾಗಿದೆ. ಇದನ್ನು ಪಾಕಿಸ್ತಾನದ ಕಡೆಯಿಂದ ಡ್ರೋನ್‌ನಿಂದ ತಂದು ಹಾಕಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

‘ಊಟದ ಡಬ್ಬಿ ಬಾಂಬ್ ಇದ್ದ ಚೀಲದಲ್ಲಿ ಇತರ ಕೆಲವು ಸ್ಫೋಟಕಗಳೂ ಪತ್ತೆಯಾಗಿವೆ’ ಎಂದು ಅಮೃತಸರ ಪೊಲೀಸ್ ಮಹಾನಿರ್ದೇಶಕ ದಿನಕರ್ ಗುಪ್ತಾ ಹೇಳಿದ್ದಾರೆ.

‘ಅಮೃತಸರ ಗ್ರಾಮಾಂತರ ಜಿಲ್ಲೆಯ ಲೋಪೊಕ್‌ ಪೊಲೀಸ್‌ ಠಾಣೆಯ ಸರಹದ್ದಿನ ಧಾಲಿಕೆ ಎಂಬ ಗ್ರಾಮದಲ್ಲಿ ಭಾನುವಾರ ನಾವು ಕೆಲ ವಸ್ತುಗಳನ್ನು ವಶಕ್ಕೆ ಪಡೆದಿದ್ದೇವೆ. ಗ್ರೆನೇಡ್‌ಗಳು ಮತ್ತು ಕಾಟ್ರಿಡ್ಜ್‌ಗಳು ನಮಗೆ ಸಿಕ್ಕಿವೆ. ಅತ್ಯಂತ ಮುಖ್ಯವಾಗಿ ಊಟದ ಡಬ್ಬಯಲ್ಲಿ ಸುಧಾರಿತ ಸ್ಫೋಟಕ ಸಾಧನಗಳು ಪತ್ತೆಯಾಗಿವೆ,‘ ಎಂದು ಗುಪ್ತಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘ಈ ಬಾಂಬ್ ಅನ್ನು ಗಡಿಯಾಚೆಯಿಂದ ಡ್ರೋನ್ ಮೂಲಕ ತಂದು ಹಾಕಲಾಗಿದೆ,‘ ಎಂದು ನಾವು ಶಂಕಿಸಿದ್ದೇವೆ ಎಂದು ಅವರು ಹೇಳಿದರು.

ಬಾಂಬ್‌ ಪತ್ತೆಯಾದ ಪ್ರದೇಶದಲ್ಲಿ ಕೆಲವು ಡ್ರೋನ್‌ಗಳು ಹಾರಾಡಿರುವ ಬಗ್ಗೆ ಗ್ರಾಮದ ಮಾಜಿ ಸರಪಂಚರು ಮಾಹಿತಿ ನೀಡಿದ್ದಾರೆ ಎಂದು ಡಿಜಿಪಿ ಹೇಳಿದ್ದಾರೆ.

ಈ ಬೆಳವಣಿಗೆಗೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ (NSG) ಸಹಾಯ ಕೇಳಿದ್ದಾರೆ.

ಕೆಲವು ತಿಂಗಳ ಹಿಂದೆ, ಪಂಜಾಬ್‌ನ ಗುರುದಾಸಪುರ ಜಿಲ್ಲೆಯ ಅಂತರಾಷ್ಟ್ರೀಯ ಗಡಿಯ ಬಳಿ ಪಾಕಿಸ್ತಾನದಿಂದ ಹಾರಿ ಬಂದ ಡ್ರೋನ್‌ನಲ್ಲಿ 11 ಗ್ರೆನೇಡ್‌ಗಳು ಪತ್ತೆಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.