
ತಿರುಪತಿ: ತಿರುಪತಿ ನಗರದಲ್ಲಿರುವ ಟಿಟಿಡಿಯ 'ಗೋವಿಂದರಾಯ ಸ್ವಾಮಿ ದೇವಸ್ಥಾನ'ದ ಮುಖ್ಯದ್ವಾರದ ಗೋಪುರ ಏರಿ ಕುಡುಕ ಯುವಕನೊಬ್ಬ ಆತಂಕ ಸೃಷ್ಟಿಸಿದ್ದ ಘಟನೆ ನಿನ್ನೆ ಸಂಜೆ ನಡೆದಿದೆ.
ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ದೇವಸ್ಥಾನದ ಪೂರ್ವದಿಕ್ಕಿನ ಮುಖ್ಯದ್ವಾರದ ಗೋಪುರ ಏರಿದ ಯುವಕ ಸುಮಾರು ಮೂರು ತಾಸು ಅಲ್ಲಿಯೇ ಕುಳಿತು ಕಳಶ ಕೀಳಲು ಪ್ರಯತ್ನಿಸಿದ್ದಾನೆ. ಕೆಳಗೆ ಇಳಿದು ಬರುವಂತೆ ಭದ್ರತಾ ಸಿಬ್ಬಂದಿ ಮನವಿ ಮಾಡಿದರೂ ಆತ ನನಗೆ ಕುಡಿಯಲು ಮದ್ಯವನ್ನು ಇಲ್ಲಿಯೇ ಕೊಡಿ ಎಂದು ಮತ್ತಷ್ಟು ಹುಚ್ಚಾಟ ಮಾಡಿದ್ದಾನೆ.
ಇದರಿಂದ ರೋಸಿಹೋದ ಭದ್ರತಾ ಸಿಬ್ಬಂದಿ ಕಡೆಗೆ ಅಗ್ನಿಶಾಮಕ ಸಿಬ್ಬಂದಿಯ ಸಹಾಯದಿಂದ ಏಣಿ ಹಿಡಿದು ಆತನನ್ನು ಕೆಳಕ್ಕೆ ಇಳಿಸಿ ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೊಗಳು ಹರಿದಾಡುತ್ತಿವೆ.
ಇನ್ನು ಈ ಘಟನೆ ಬಗ್ಗೆ ತಿರುಮಲದ ಟಿಟಿಡಿಯನ್ನು ಟೀಕಿಸುತ್ತಿದ್ದಾರೆ. ಇದೊಂದು ದೊಡ್ಡ ಭದ್ರತಾ ವೈಫಲ್ಯ. ಭದ್ರತಾ ದೃಷ್ಟಿಯಿಂದ ಮತ್ತೆ ಟಿಟಿಡಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ವೈಎಸ್‌ಆರ್‌ಸಿಪಿ ಸೇರಿದಂತೆ ಅನೇಕರು ದೂರಿದ್ದಾರೆ.
ಬಂಧಿತ ಯುವಕನನ್ನು ತೆಲಂಗಾಣದ ನಿಜಾಮಾಬಾದ್‌ನ ಕುತ್ತಾಡಿ ಮೂಲದನು ಎನ್ನಲಾಗಿದೆ. ತಿರುಮಲದ ಬಾಲಾಜಿ ದೇವಾಲಯದ ದರ್ಶನಕ್ಕೆ ತೆರಳುವವರು ಮೊದಲಿಗೆ ಗೋವಿಂದಸ್ವಾಮಿ ದರ್ಶನ ಮಾಡಿಕೊಂಡು ಹೋಗುವುದು ವಾಡಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.