
ಹೈದರಾಬಾದ್: ತಿರುಪತಿ ಲಡ್ಡು ಪ್ರಸಾದ ಕಲಬೆರಕೆ ತುಪ್ಪ ಪ್ರಕರಣದ ಸಂಚುಕೋರರನ್ನು ಪತ್ತೆ ಹಚ್ಚಲು ತನಿಖಾ ಆಯೋಗ ರಚಿಸಲು ಆಂಧ್ರಪ್ರದೇಶ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸುಪ್ರೀಂ ಕೋರ್ಟ್ ನೇಮಿಸಿರುವ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ಈಗಾಗಲೇ ಈ ಪ್ರಕರಣದ ತನಿಖೆ ನಡೆಸಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು, ಪಾಮ್ ಆಯಿಲ್ ಕಲಬೆರಕೆ ಮಾಡಿರುವುದನ್ನು ದೃಢಪಡಿಸಲಾಗಿದೆ.
ಎಸ್‌ಐಟಿ ತುಪ್ಪದಲ್ಲಿ ಆಗಿರುವ ಕಲಬೆರಕೆ, ಪೂರೈಕೆ ಅಕ್ರಮ, ಟೆಂಡರ್ ನಿಯಮಗಳನ್ನು ಸಡಿಲಗೊಳಿಸಿರುವುದು, ಲಡ್ಡು ಪ್ರಸಾದದ ಗುಣಮಟ್ಟ ಪರೀಕ್ಷೆಯಲ್ಲಿ ಆಗಿರುವ ಲೋಪಗಳು, ನಕಲಿ ದಾಖಲೆ ಸೃಷ್ಟಿಯ ಬಗ್ಗೆಯೂ ಎಸ್‌ಐಟಿ ವರದಿ ನೀಡಿದೆ. ಈ ಅಂಶಗಳನ್ನು ಆಧರಿಸಿ ತನಿಖಾ ಆಯೋಗ ರಚಿಸಲು ಸಂಪುಟ ನಿರ್ಧಾರ ತೆಗೆದುಕೊಂಡಿದೆ ಎಂದು ಹಣಕಾಸು ಸಚಿವ ಪೈಯಾವುಲ ಕೇಶವ್ ಸಂಪುಟ ಸಭೆಯ ಬಳಿಕ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಟಿಟಿಡಿಯ ಪಾವಿತ್ರ್ಯ ಸಂರಕ್ಷಿಸುವುದು ನಮ್ಮ ಆದ್ಯತೆ. ಲಡ್ಡು ಪ್ರಸಾದದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ’ ಎಂದು ಕೇಶವ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.