ADVERTISEMENT

ತಿರುಪತಿ ಕಾಲ್ತುಳಿತ ದುರಂತ: ನ್ಯಾಯಾಂಗ ತನಿಖೆಗೆ ಸಿಎಂ ನಾಯ್ಡು ಆದೇಶ

​ಪ್ರಜಾವಾಣಿ ವಾರ್ತೆ
Published 9 ಜನವರಿ 2025, 15:35 IST
Last Updated 9 ಜನವರಿ 2025, 15:35 IST
<div class="paragraphs"><p>ತಿರುಪತಿಯಲ್ಲಿ ಬುಧವಾರ ಸಂಭವಿಸಿದ್ದ ಕಾಲ್ತುಳಿತ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು.</p></div>

ತಿರುಪತಿಯಲ್ಲಿ ಬುಧವಾರ ಸಂಭವಿಸಿದ್ದ ಕಾಲ್ತುಳಿತ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು.

   

–ಪಿಟಿಐ ಚಿತ್ರ

ತಿರುಪತಿ: 'ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಬುಧವಾರ ಸಂಭವಿಸಿದ ಕಾಲ್ತುಳಿತ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ‘ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಗುರುವಾರ ತಿಳಿಸಿದರು.

ADVERTISEMENT

’ನಿರ್ಲಕ್ಷ್ಯದ ಆರೋಪದ ಮೇರೆಗೆ ಡಿಎಸ್‌ಪಿ ಸೇರಿದಂತೆ ಇಬ್ಬರು ಅಧಿಕಾರಿಗಳ ಅಮಾನತು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌.ಪಿ) ಸೇರಿದಂತೆ ಮೂವರು ಹಿರಿಯ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ‘ ಎಂದು ನಾಯ್ಡು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

’ತಿರುಪತಿಯ ನಿರ್ವಹಣೆ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಕೆಲ ಲೋಪದೋಷಗಳಿರುವುದು ಗಮನಕ್ಕೆ ಬಂದಿದ್ದು, ಅವುಗಳನ್ನು ಸರಿಪಡಿಸಲಾಗುವುದು‘ ಎಂದು ಅವರು ಹೇಳಿದರು.

ತಲಾ ₹ 25 ಲಕ್ಷ ಪರಿಹಾರ:

ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಮೃತಪಟ್ಟ ಆರು ಜನರ ಕುಟುಂಕ್ಕೆ ತಲಾ ₹ 25 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹ 2 ಲಕ್ಷ ಪರಿಹಾರವನ್ನು ಘೋಷಿಸಿದರು.

ಈ ಹಿಂದೆ ತಿರುಮಲ ಬೆಟ್ಟಗಳಲ್ಲಿ ಟೋಕನ್‌ ನೀಡುವ ವ್ಯವಸ್ಥೆ ಇತ್ತು. ಅದಕ್ಕೆ ವಿರುದ್ಧವಾಗಿ ಹಿಂದಿನ ಆಡಳಿತವು ತಿರುಪತಿಯಲ್ಲಿ ಟೋಕನ್‌ ನೀಡುವ ಹೊಸ ವ್ಯವಸ್ಥೆ ಪರಿಚಯಿಸಿತ್ತು ಎಂದು ನಾಯ್ಡು ಹೇಳಿದರು.

ತಿರುಪತಿಯ ಎಂಜಿಎಂ ಶಾಲೆ ಬಳಿಯ ಬೈರಾಗಿ ಪಟ್ಟೇಡ ಬಳಿ ಬುಧವಾರ ನೂರಾರು ಜನರು ವೈಕುಂಠ ದ್ವಾರ ದರ್ಶನಕ್ಕಾಗಿ ಟಿಕೆಟ್‌ ಪಡೆಯಲು ನಿಂತಿದ್ದಾಗ ನೂಕು ನುಗ್ಗಲು ಉಂಟಾಯಿತು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಆರು ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ವರ್ಗಾವಣೆ ಆದವರು: ಪೊಲೀಸ್‌ ವರಿಷ್ಠಾಧಿಕಾರಿ ಸುಬ್ಬರಾಯುಡು ಟಿಟಿಡಿ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ಕೆ. ಗೌತಮಿ ಸಿವಿಎಸ್‌ಒ ಶ್ರೀಧರ್‌ ಅಮಾನತು ಆದವರು: ಡಿಎಸ್‌ಪಿ ರಮಣ್‌ ಕುಮಾರ್‌ ಎಸ್‌ವಿ ಗೋಶಾಲಾದ ನಿರ್ದೇಶಕ ಡಾ. ಹರಿನಾಥ ರೆಡ್ಡಿ 

ಗಾಯಾಳುಗಳ ಭೇಟಿ ಮಾಡಿದ ನಾಯ್ಡು

ತಿರುಪತಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿರುವ ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಎಸ್‌ವಿಐಎಂಸ್‌) ಗುರುವಾರ ಭೇಟಿ ನೀಡಿದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಆಸ್ಪತ್ರೆಯಲ್ಲಿ 90 ನಿಮಿಷಗಳವರೆಗೂ ಇದ್ದ ಅವರು ಪ್ರತಿ ಗಾಯಾಳುಗಳನ್ನು ಮಾತನಾಡಿಸಿದರು. ಇದಕ್ಕೂ ಮುನ್ನ ಅವರು ಕಾಲ್ತುಳಿತ ಸಂಭವಿಸಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ಪೊಲೀಸರ ಸ್ಥಳ ನಿಯೋಜನೆ ಬದಲಾಯಿಸಿದ್ದೇ ಕಾಲ್ತುಳಿತಕ್ಕೆ ಕಾರಣ’
ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ಜ.6ರಿಂದ 8 ವರೆಗೆ ಕುಪ್ಪಂನಲ್ಲಿ ಇದ್ದರು. ಅವರ ಕಾರ್ಯಕ್ರಮದ ಭದ್ರತೆಗಾಗಿ ಪೊಲೀಸರನ್ನು ಕುಪ್ಪಂನಲ್ಲಿ ನಿಯೋಜನೆ ಮಾಡಿ, ತಿರುಪತಿಯಲ್ಲಿನ ಜನದಟ್ಟಣೆ ನಿರ್ವಹಣೆಗೆ ಕ್ರಮ ಕೈಗೊಳ್ಳ ದಿರುವುದೇ ಕಾಲ್ತುಳಿತಕ್ಕೆ ಕಾರಣ ಎಂದು ವೈ.ಎಸ್‌.ಆರ್‌ ಕಾಂಗ್ರೆಸ್‌ ಮುಖ್ಯಸ್ಥ ವೈ.ಎಸ್.ಜಗನ್‌ ಮೋಹನ್ ರೆಡ್ಡಿ ಗುರುವಾರ ಆರೋಪಿಸಿದ್ದಾರೆ. ಈ ಘಟನೆ ಕುರಿತು ಸರ್ಕಾರ, ಟಿಟಿಡಿ ಆಡಳಿತ ಮತ್ತು ಜಿಲ್ಲೆಯ ಅಧಿಕಾರಿಗಳಿಗೆ ಉತ್ತರದಾಯಿತ್ವ ನಿಗದಿ ಮಾಡಬೇಕು ಎಂದೂ ಆಗ್ರಹಿಸಿದ್ದಾರೆ. ಭೇಟಿ: ತಿರುಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಅವರು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.