ADVERTISEMENT

ಒಡಿಶಾ ರೈಲು ದುರಂತದ ಹಿಂದೆ ಟಿಎಂಸಿ ಪಿತೂರಿ: ಮಮತಾ ವಿರುದ್ಧ ಸುವೇಂದು ಅಧಿಕಾರಿ ಗುಡುಗು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜೂನ್ 2023, 3:09 IST
Last Updated 6 ಜೂನ್ 2023, 3:09 IST
ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ (ಪಿಟಿಐ ಚಿತ್ರ)
ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ (ಪಿಟಿಐ ಚಿತ್ರ)   

ನವದೆಹಲಿ: ಒಡಿಶಾದ ಬಾಲೇಶ್ವರ್‌ನಲ್ಲಿ ಸಂಭವಿಸಿದ ರೈಲು ದುರಂತದ ಹಿಂದೆ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಪಿತೂರಿ ಇದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಡಿಶಾ ರೈಲು ದುರಂತದ ಹಿಂದೆ ಟಿಎಂಸಿಯ ಪಿತೂರಿ ಇದೆ. ಘಟನೆ ಬೇರೆ ರಾಜ್ಯದಲ್ಲಾಗಿದ್ದರು ಅವರು (ಮಮತಾ ಬ್ಯಾನರ್ಜಿ) ನಿನ್ನೆಯಿಂದ ಏಕೆ ಗಾಬರಿಗೊಂಡಿದ್ದಾರೆ. ಸಿಬಿಐ ತನಿಖೆಗೆ ಅವರೇಕೆ ಹೆದರುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.

‘ಟಿಎಂಸಿ ಪಕ್ಷದವರು ಪೊಲೀಸರ ನೆರವಿನೊಂದಿಗೆ ರೈಲ್ವೆ ಅಧಿಕಾರಿಗಳಿಬ್ಬರ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಇಬ್ಬರು ರೈಲ್ವೆ ಅಧಿಕಾರಿಗಳ ನಡುವಿನ ಸಂಭಾಷಣೆ ಇವರಿಗೆ ಹೇಗೆ ಗೊತ್ತಾಯಿತು? ಸಂಭಾಷಣೆ ಹೇಗೆ ಸೋರಿಕೆಯಾಯಿತು ಎಂಬುದು ಸಿಬಿಐ ತನಿಖೆಯಿಂದ ಹೊರಬರಬೇಕಿದೆ. ಸತ್ಯಾಂಶ ತಿಳಿಯದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇನೆ’ ಎಂದು ತಿಳಿಸಿದ್ದಾರೆ.

ADVERTISEMENT

ರೈಲು ದುರಂತ ಪ್ರಕರಣ: ತನಿಖೆ ಆರಂಭಿಸಿದ ಸಿಬಿಐ

ಭುವನೇಶ್ವರ: ಬಾಲೇಶ್ವರ್‌ನಲ್ಲಿ ಸಂಭವಿಸಿದ ರೈಲು ದುರಂತ ಕುರಿತಂತೆ ಸಿಬಿಐ ಸೋಮವಾರ ತನಿಖೆ ಆರಂಭಿಸಿದೆ. 10 ಸದಸ್ಯರ ತಂಡ ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಿತು ಎಂದು ರೈಲ್ವೆ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.

ಖುರ್ದಾ ರೋಡ್‌ ವಿಭಾಗದ ಡಿಆರ್‌ಎಂ ರಿಂತೇಶ್‌ ರೇ ಅವರು, ‘ಸಿಬಿಐ ತಂಡ ತನಿಖೆ ಆರಂಭಿಸಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ’ ಎಂದರು. ರೈಲ್ವೆ ಮಂಡಳಿಯು ಭಾನುವಾರ ಅಪಘಾತದ ತನಿಖೆಯ ಹೊಣೆಯನ್ನು ಸಿಬಿಐಗೆ ಒಪ್ಪಿಸಿತ್ತು.

ಮೃತರ ಸಂಖ್ಯೆ 278ಕ್ಕೆ ಏರಿಕೆ: ಈ ಮಧ್ಯೆ ರೈಲ್ವೆ ಅಪಘಾತದಲ್ಲಿ ಗಾಯಗೊಂಡಿದ್ದ ಮೂವರು ಮೃತಪಟ್ಟಿದ್ದು, ಮೃತರ ಸಂಖ್ಯೆ 278ಕ್ಕೆ ಏರಿದೆ. ಒಟ್ಟು 1,100 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ರಿಂತೇಶ್ ರೇ ತಿಳಿಸಿದ್ದಾರೆ.

ಮೃತರ ಪೈಕಿ 177 ಜನರ ಗುರುತು ಪತ್ತೆಯಾಗಿದ್ದು, ಇನ್ನೂ 101 ಜನರ ಗುರುತು ಪತ್ತೆಯಾಗಬೇಕಿದೆ. ಶವಗಳನ್ನು ವಿವಿಧ ಆರು ಆಸ್ಪತ್ರೆಗಳಲ್ಲಿ ವೈಜ್ಞಾನಿಕ ಕ್ರಮದಲ್ಲಿ ರಕ್ಷಿಸಿಡಲಾಗಿದೆ ಎಂದು ತಿಳಿಸಿದ್ದಾರೆ.

ನಾಪತ್ತೆಯಾದವರ ವಿವರ ಸಂಗ್ರಹಿಸಲು ರೈಲ್ವೆ ಇಲಾಖೆಯು ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸಗಢ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿಗೆ ಸಿಬ್ಬಂದಿಯನ್ನು ಕಳುಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.