ಕೋಲ್ಕತ್ತ: ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರ ವಿರುದ್ಧ ಮಾತನಾಡುವವರ ಗಂಟಲಿಗೆ ಆ್ಯಸಿಡ್ ಸುರಿಯುವುದಾಗಿ ಟಿಎಂಸಿ ಶಾಸಕ ಅಬ್ದುರ್ ರಹೀಮ್ ಬಾಕ್ಸಿ ಹೇಳಿದ್ದಾರೆ.
ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ರಹೀಮ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
‘ಬಂಗಾಳಿ ವಲಸೆ ಕಾರ್ಮಿಕರ ಮೇಲಿನ ದಾಳಿಯ ಬಗೆಗಿನ ಖಂಡನಾ ನಿರ್ಣಯದ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಬಿಜೆಪಿ ಶಾಸಕರೊಬ್ಬರು ನೀಡಿದ ಅಸಹ್ಯಕರ ಹೇಳಿಕೆಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಆ ಶಾಸಕರು ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರನ್ನು ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾಗಳು ಎಂದು ಹೇಳಿದ್ದಾರೆ. ಕೆಲಸಕ್ಕಾಗಿ ರಾಜ್ಯದ ಹೊರಗೆ ಹೋಗುತ್ತಿರುವ ಬಂಗಾಳದ ನಾಗರಿಕರನ್ನು ಅವಮಾನಿಸಿದ್ದಾರೆ’ ಎಂದು ಖಾನ್ ಟೀಕಿಸಿದ್ದಾರೆ.
‘ನಾನು ಎಚ್ಚರಿಕೆ ನೀಡುತ್ತಿದ್ದೇನೆ. ಮೌನವಾಗಿರುವ ಬದಲು ಯಾರಾದರೂ ಇಂತಹ ಹೇಳಿಕೆ ನೀಡಿದರೆ ಅವರ ಗಂಟಲಿಗೆ ಆ್ಯಸಿಡ್ ಸುರಿಯುತ್ತೇನೆ’ ಎಂದು ಹೇಳಿದರು.
‘ವಿಭಜಕ ರಾಜಕೀಯ ಅಜೆಂಡಾದೊಂದಿಗೆ ರಾಜ್ಯದ ಜನರನ್ನು ಬಾಂಗ್ಲಾದೇಶದ ನುಸುಳುಕೋರರಂತೆ ನೋಡುವ ಬಿಜೆಪಿ ನಾಯಕರು ತಮ್ಮ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳಬೇಕು’ ಎಂದು ಟೀಕಿಸಿದರು.
ಹಿಂಸಾಚಾರ ಹೊಸದಲ್ಲ:
‘ಟಿಎಂಸಿಗೆ ಹಿಂಸಾಚಾರ ಹೊಸದಲ್ಲ. ಇದು ಆ ಪಕ್ಷದವರ ರಾಜಕೀಯ ಸಂಸ್ಕೃತಿ. ಮಾಲದಾ ಮತ್ತು ಮುರ್ಶಿದಾಬಾದ್‌ನಲ್ಲಿರುವ ಬಾಂಗ್ಲಾದೇಶಿಗರು ಮತ್ತು ರೋಹಿಂಗ್ಯಗಳು ಮಮತಾ ಬ್ಯಾನರ್ಜಿ ಅವರ ಮತ ಬ್ಯಾಂಕ್. ಇಂತಹ ಹೇಳಿಕೆಗಳು, ಟಿಎಂಸಿ ಹೇಗೆ ರಾಜಕೀಯದಲ್ಲಿ ಉಳಿದಿದೆ ಎಂಬುವುದರ ಪ್ರತಿಬಿಂಬವಾಗಿದೆ’ ಎಂದು ಬಿಜೆಪಿ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯಾ ಅವರು ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.