ADVERTISEMENT

‘ಸತ್ತ’ ಮತದಾರರನ್ನು ರ್‍ಯಾಲಿಗೆ ಕರೆತಂದ ಟಿಎಂಸಿ ಸಂಸದ

ಪಿಟಿಐ
Published 13 ಜನವರಿ 2026, 15:56 IST
Last Updated 13 ಜನವರಿ 2026, 15:56 IST
<div class="paragraphs"><p>ಅಭಿಷೇಕ್‌ ಬ್ಯಾನರ್ಜಿ ಅವರು ಕೂಚ್‌ ಬಿಹಾರ್‌ನಲ್ಲಿ ಮಂಗಳವಾರ ರ್‍ಯಾಲಿಯಲ್ಲಿ ಮಾತನಾಡಿದರು </p></div>

ಅಭಿಷೇಕ್‌ ಬ್ಯಾನರ್ಜಿ ಅವರು ಕೂಚ್‌ ಬಿಹಾರ್‌ನಲ್ಲಿ ಮಂಗಳವಾರ ರ್‍ಯಾಲಿಯಲ್ಲಿ ಮಾತನಾಡಿದರು

   

–ಪಿಟಿಐ ಚಿತ್ರ

ಕೂಚ್‌ ಬಿಹಾರ್ (ಪಶ್ಚಿಮ ಬಂಗಾಳ): ಚುನಾವಣಾ ಅಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್‌) ಹೆಸರಿನಲ್ಲಿ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಆರೋಪಿಸಿದರು.

ADVERTISEMENT

ಕೂಚ್‌ ಬಿಹಾರ್‌ನಲ್ಲಿ ಮಂಗಳವಾರ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಸ್ತೆ, ವಸತಿ ಅಥವಾ ನೀರಾವರಿಗೆ ಸಂಬಂಧಿಸಿದ ಅನುದಾನ ಮಾತ್ರವಲ್ಲ, ಮತದಾನದ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದೆ’ ಎಂದು ದೂರಿದರು.

ಚುನಾವಣಾ ಆಯೋಗವು ‘ಸತ್ತಿದ್ದಾರೆ’ ಎಂಬ ಕಾರಣ ನೀಡಿ ಕರಡು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಹತ್ತು ಮಂದಿಯನ್ನು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅಭಿಷೇಕ್‌ ಅವರು ರ್‍ಯಾಲಿಗೆ ಕರೆತಂದರು.

10 ಮಂದಿಯನ್ನು ವೇದಿಕೆಯ ಮೇಲೆ ಕರೆಸಿದ ಅವರು, ‘ಇವರೆಲ್ಲರೂ ಕೂಚ್ ಬಿಹಾರ್‌ನಲ್ಲಿ ಹುಟ್ಟಿ ಬೆಳೆದವರು. ಆದರೆ ಬಿಜೆಪಿಯ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವ ಚುನಾವಣಾ ಆಯೋಗವು ಎಲ್ಲರನ್ನೂ ‘ಸತ್ತಿದ್ದಾರೆ’ ಎಂದು ಘೋಷಿಸಿದೆ. ಈ ಹತ್ತು ಮಂದಿಯ ಹೆಸರನ್ನು ಮತದಾರರ ಕರಡು ಪಟ್ಟಿಯಿಂದ ಕೈಬಿಡಲಾಗಿದೆ’ ಎಂದು ಹೇಳಿದರು.

ಈ ತಿಂಗಳ ಆರಂಭದಲ್ಲಿ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದ ರ್‍ಯಾಲಿಯಲ್ಲೂ ಅವರು ಆಯೋಗವು ‘ಸತ್ತಿದ್ದಾರೆ’ ಎಂದು ಘೋಷಿಸಿರುವ ತಲಾ ಇಬ್ಬರು ಪುರುಷರು ಮತ್ತು ಮಹಿಳೆಯನ್ನು ವೇದಿಕೆಗೆ ಕರೆಸಿದ್ದರು.

‘ಎಸ್‌ಐಆರ್‌ ಸಂಬಂಧಿತ ವಿಚಾರಣೆಗೆ ಹಾಜರಾಗುವಂತೆ ಕೂಚ್ ಬಿಹಾರ್ ಜಿಲ್ಲೆಯ ಸುಮಾರು 3.5 ಲಕ್ಷ ಜನರಿಗೆ ಚುನಾವಣಾ ಆಯೋಗವು ನೋಟಿಸ್ ನೀಡಿದೆ. ಈ ಎಲ್ಲ ಜನರ ಹೆಸರುಗಳು ಮತದಾರರ ಅಂತಿಮ ಪಟ್ಟಿಯಲ್ಲಿರುವಂತೆ ನೋಡಿಕೊಳ್ಳಬೇಕು’ ಎಂದು ಟಿಎಂಸಿ ಕಾರ್ಯಕರ್ತರಿಗೆ ಸೂಚಿಸಿದರು. 

ಎಸ್‌ಐಆರ್‌ ಪ್ರಕ್ರಿಯೆ ವೇಳೆ ಆತಂಕಕ್ಕೆ ಒಳಗಾಗಿ ಬಂಗಾಳದಲ್ಲಿ ಸುಮಾರು 78 ಜನರು ಮೃತಪಟ್ಟಿದ್ದಾರೆ ಎಂದು ಅವರು ಆರೋಪಿಸಿದರು. 

ಕೂಚ್ ಬಿಹಾರ್ ಜಿಲ್ಲೆಯ ಎಲ್ಲ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲೂ ಟಿಎಂಸಿ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದು ಮತದಾರರಿಗೆ ಮನವಿ ಮಾಡಿದರು. 

‘ಕಾರಣವಿಲ್ಲದೆ 54 ಲಕ್ಷ ಮತದಾರರ ಹೆಸರು ರದ್ದು’

ಕೋಲ್ಕತ್ತ: ‘ರಾಜ್ಯದಲ್ಲಿ ಎಸ್‌ಐಆರ್‌ ನಡೆದ ವೇಳೆ ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್‌ಒ) ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಏಕಪಕ್ಷೀಯವಾಗಿ 54 ಲಕ್ಷ ಮಂದಿ ನೈಜ ಮತದಾರರ ಹೆಸರನ್ನು ಕರಡು ಮತದಾರರ ಪಟ್ಟಿಯಿಂದ ತೆಗದುಹಾಕಿದ್ದಾರೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. 

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕಣೆ (ಎಸ್‌ಐಆರ್‌) ವೇಳೆ ಈ ರೀತಿ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಮತದಾರರಿಗೆ ತಮ್ಮನ್ನು ತಾವು ನಿರೂಪಿಸಿಕೊಳ್ಳಲು ಅವಕಾಶವನ್ನೂ ನೀಡಿಲ್ಲ. ಜತೆಗೆ ಅವರ ಹೆಸರನ್ನು ಏಕೆ ತೆಗೆದುಹಾಕಲಾಗಿದೆ ಎಂಬ ಕಾರಣವನ್ನೂ ತಿಳಿಸಿಲ್ಲ ಎಂದೂ ಮಮತಾ ದೂರಿದ್ದಾರೆ.