ADVERTISEMENT

ಮೊರ್ಬಿ ಮೇಲ್ಸೇತುವೆ ದುರಂತ ಕುರಿತು ಟ್ವೀಟ್ ಮಾಡಿದ್ದಕ್ಕೆ ಗೋಖಲೆ ಬಂಧನ: ಟಿಎಂಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2022, 5:29 IST
Last Updated 6 ಡಿಸೆಂಬರ್ 2022, 5:29 IST
ಸಾಕೇತ್‌ ಗೋಖಲೆ (ಚಿತ್ರಕೃಪೆ: Twitter/@SaketGokhale)
ಸಾಕೇತ್‌ ಗೋಖಲೆ (ಚಿತ್ರಕೃಪೆ: Twitter/@SaketGokhale)   

ನವದೆಹಲಿ: ಗುಜರಾತ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಮೊರ್ಬಿ ಮೇಲ್ಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ಟ್ವೀಟ್‌ ಮಾಡಿದ್ದ ತೃಣಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) ರಾಷ್ಟ್ರೀಯ ವಕ್ತಾರ ಸಾಕೇತ್‌ ಗೋಖಲೆ ಅವರನ್ನು ಗುಜರಾತ್‌ ಪೊಲೀಸರು ಬಂಧಿಸಿದ್ದಾರೆ ಎಂದು ಪಕ್ಷದ ನಾಯಕ ಡೆರೆಕ್‌ ಒಬ್ರಿಯಾನ್‌ ಕಿಡಿಕಾರಿದ್ದಾರೆ.

ಗೋಖಲೆ ಬಂಧನ ಸಂಬಂಧ ಟ್ವೀಟ್ ಮಾಡಿರುವ ಡೆರೆಕ್‌,ಗೋಖಲೆ ಅವರು ಸೋಮವಾರ ರಾತ್ರಿ 9ಕ್ಕೆ ನವದೆಹಲಿಯಿಂದ ಜೈಪುರಕ್ಕೆ ಪ್ರಯಾಣಿಸಿದ್ದರು. ರಾಜಸ್ಥಾನದ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಅವರನ್ನು ಗುಜರಾತ್‌ ಪೊಲೀಸರು ಕರೆದೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಗೋಖಲೆ ಅವರು ತಮ್ಮ ತಾಯಿಗೆ ಮುಂಜಾನೆ 2ರ ವೇಳೆಗೆ ಕರೆ ಮಾಡಿದ್ದಾರೆ. ತಮ್ಮನ್ನು ಅಹಮದಾಬಾದ್‌ಗೆ ಕರೆದೊಯ್ಯುತ್ತಿರುವುದಾಗಿ ಮತ್ತು ಮಧ್ಯಾಹ್ನ ಅಹಮದಾಬಾದ್‌ ತಲುಪುವುದಾಗಿ ಹೇಳಿದ್ದಾರೆ.

ADVERTISEMENT

'ಒಂದೆರಡು ನಿಮಿಷ ಕರೆ ಮಾಡಲು ಅವಕಾಶ ನೀಡಿದ್ದ ಪೊಲೀಸರು, ಬಳಿಕ ಗೋಖಲೆ ಅವರ ಫೋನ್‌ ಅನ್ನು ವಶಕ್ಕೆ ಪಡೆದಿದ್ದಾರೆ' ಎಂದೂ ಮಾಹಿತಿ ನೀಡಿದ್ದಾರೆ.

ಬಿಜೆಪಿಯು ಸೇಡಿನ ರಾಜಕೀಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿದೆ ಎಂದೂ ಡೆರೆಕ್‌ ಟೀಕಾ ಪ್ರಹಾರ ನಡೆಸಿದ್ದಾರೆ.

ಪಶ್ಚಿಮ ಗುಜರಾತ್‌ನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶತಮಾನದಷ್ಟು ಹಳೆಯ ತೂಗುಸೇತುವೆ ಅಕ್ಟೋಬರ್‌ 30ರಂದು ಮುರಿದು ಬಿದ್ದಿತ್ತು. ದುರಂತದಲ್ಲಿ 135 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.