ಕರೂರು: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ಅವರು ರ‍್ಯಾಲಿ ನಿಗದಿಯಾಗಿದ್ದ ವೇಲುಸಾಮಿಪುರಂನಲ್ಲಿ ಪ್ರಚಾರ ವಾಹನದಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ಇದ್ದರು. ಇದರಿಂದಾಗಿ ಜನಜಂಗುಳಿ ಹೆಚ್ಚಾಯಿತು. ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ನಿಂತಿದ್ದ ಜನರು ನಿತ್ರಾಣಗೊಂಡರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ವಿಜಯ್ ವಿರುದ್ಧ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಲ್ಲ. ಆದರೆ ಟಿವಿಕೆ ಪಕ್ಷದ ಕರೂರು ಜಿಲ್ಲಾ ಕಾರ್ಯದರ್ಶಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಉಪ ಪ್ರಧಾನ ಕಾರ್ಯದರ್ಶಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಶನ್ ನೇತೃತ್ವದಲ್ಲಿ ರಚನೆಯಾಗಿರುವ ಸಮಿತಿಯು ಘಟನೆ ಕುರಿತ ತನಿಖೆಯನ್ನು ಮುಂದುವರಿಸಿದೆ. ಗಾಯಾಳುಗಳೊಂದಿಗೆ ಅರುಣಾ ಅವರು ಸೋಮವಾರ ಮಾತುಕತೆ ನಡೆಸಿದರು.
ವಿಜಯ್ ಅವರನ್ನು ಹತ್ತಿರದಿಂದ ನೋಡಲು ಬೆಂಬಲಿಗರು ಏಕಕಾಲಕ್ಕೆ ನುಗ್ಗಿದ ಕಾರಣ ಕಾಲ್ತುಳಿತ ಸಂಭವಿಸಿತು. ಕಿಕ್ಕಿರಿದ ಸ್ಥಳದಲ್ಲಿ ಅಪಾರ ಜನರು ಸೇರಿದ್ದೂ ದುರಂತಕ್ಕೆ ಮತ್ತೊಂದು ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ರ್‍ಯಾಲಿಯಲ್ಲಿ ಒಂದಷ್ಟು ಜನ ತಮ್ಮ ನೆಚ್ಚಿನ ನಟನನ್ನು ನೋಡಲು ಸಮೀಪದ ಮರಗಳು ಮತ್ತು ಶೆಡ್‌ಗಳನ್ನು ಏರಿ ಕುಳಿತಿದ್ದರು. ಕೆಲವರು ಆಯ ತಪ್ಪಿ ಅಲ್ಲಿಂದ ಕೆಳಗಿರುವ ಜನರ ಮೇಲೆ ಬಿದ್ದುದು ನೂಕುನುಗ್ಗಲು ಉಂಟಾಗಲು ಕಾರಣ. ಇನ್ನು ಕೆಲವರು ಜನಜಂಗುಳಿಯಲ್ಲಿ ಸಿಲುಕಿ ಉಸಿರಾಡಲೂ ಕಷ್ಟವಾಗಿ ಮೃತಪಟ್ಟಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಈ ಮಧ್ಯೆ ಕಾಲ್ತುಳಿತ ದುರಂತದ ಸಂತ್ರಸ್ತರನ್ನು ಭೇಟಿಯಾಗಲು ಆಸ್ಪತ್ರೆಗಳಿಗೆ ವಿಜಯ್ ಅವರು ಭೇಟಿ ನೀಡದಂತೆ ಪೊಲೀಸರು ಸೂಚಿಸಿದ್ದಾರೆ. ವಿಜಯ್ ಅವರ ಭೇಟಿ ವಿಚಾರ ತಿಳಿದು ಜನರು ಆಸ್ಪತ್ರೆ ಮುಂದೆ ಜಮಾಯಿಸಬಹುದು ಎಂಬ ಕಾರಣದಿಂದ ಈ ಸೂಚನೆ ನೀಡಲಾಗಿದೆ ಎಂದು ಟಿವಿಕೆ ಮೂಲಗಳು ತಿಳಿಸಿವೆ.
ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಸುಳ್ಳುಸುದ್ದಿ ಹಬ್ಬಿಸದಿರಿ. ಪ್ರತಿಯೊಬ್ಬರೂ ಜವಾಬ್ದಾರಿಯಿಂದ ವರ್ತಿಸಿ– ಎಂ.ಕೆ.ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ
ಕರೂರು: ಮೃತರ ಸಂಖ್ಯೆ 41ಕ್ಕೆ ಏರಿಕೆ
ಕರೂರು: ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ರ‍್ಯಾಲಿ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. 60 ವರ್ಷದ ಗಾಯಾಳು ಮಹಿಳೆಯೊಬ್ಬರು ಇಲ್ಲಿನ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಇದರೊಂದಿಗೆ ದುರಂತದಲ್ಲಿ ಮೃತಪಟ್ಟ ಮಹಿಳೆಯರ ಸಂಖ್ಯೆ 18ಕ್ಕೆ ಏರಿದೆ. ಜೊತೆಗೆ 10 ಮಕ್ಕಳು ಮತ್ತು 13 ಮಂದಿ ಪುರುಷರು ಮೃತಪಟ್ಟಿದ್ದಾರೆ.
ಸ್ಟಾಲಿನ್ ವಿಜಯ್ ಜತೆ ರಾಹುಲ್ ಮಾತುಕತೆ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ವಿಚಾರಿಸಿದರು. ನಟ ವಿಜಯ್ ಅವರಿಗೂ ಕರೆ ಮಾಡಿ ಟಿವಿಕೆ ಪಕ್ಷದ ಬೆಂಬಲಿಗರ ಸಾವಿಗೆ ಸಂತಾಪ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
‘ಕರೆ ಮಾಡಿ ಕರೂರು ದುರಂತದ ಬಗ್ಗೆ ವಿಚಾರಿಸಿದ ರಾಹುಲ್ ಗಾಂಧಿ ಅವರಿಗೆ ಧನ್ಯವಾದ. ಕಾಲ್ತುಳಿತದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದರು’ ಎಂದು ಸ್ಟಾಲಿನ್ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಗಾಯಾಳುಗಳ ಆರೋಗ್ಯ ವಿಚಾರಿಸಿದ ಹಣಕಾಸು ಸಚಿವೆ
ಕರೂರು: ಟಿವಿಕೆ ರ‍್ಯಾಲಿ ವೇಳೆ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರ ನೋವಿಗೆ ಸಾಂತ್ವನ ಹೇಳಲು ಪದಗಳೇ ಇಲ್ಲದಂತಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದರು. ಇಂಥ ದುರಂತ ಮತ್ತೆ ಮರುಕಳಿಸಬಾರದು ಎಂದು ಅವರು ಹೇಳಿದರು.
ಕರೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಬಳಿಕ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಗಾಯಾಳುಗಳಿಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದರು. ನಂತರ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.