ADVERTISEMENT

2026 ಜನವರಿ 17: ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜನವರಿ 2026, 15:41 IST
Last Updated 17 ಜನವರಿ 2026, 15:41 IST
   

ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ವೀರಶೈವ ಲಿಂಗಾಯತ ಸಂಪ್ರದಾಯದಂತೆ ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆ

ಭಾಲ್ಕಿ (ಬೀದರ್ ಜಿಲ್ಲೆ): ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಮಾಜಿಸಚಿವ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ (102) ಅವರ ಅಂತ್ಯಕ್ರಿಯೆ ಶನಿವಾರ ಪಟ್ಟಣ ಹೊರವಲಯದ ಚಿಕ್ಕಲ್ ಚಾಂದ ಸಮೀಪದ ತೋಟದ ಮನೆಯ ಶಾಂತಿಧಾಮದಲ್ಲಿ ನೆರವೇರಿತು. ಪತ್ನಿ ದಿವಂಗತ ಲಕ್ಷ್ಮೀಬಾಯಿ ಅವರ ಸಮಾಧಿಯ ಬಳಿಯೇ ಭೀಮಣ್ಣ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ತಾರತಮ್ಯ ನಿವಾರಣಾ ಕಾಯ್ದೆ ಇಂದಿನ ಅಗತ್ಯ: ರಾಹುಲ್‌ ಗಾಂಧಿ

ನವದೆಹಲಿ: ಭಾರತದಲ್ಲಿ ಶಾಲಾ ಪ್ರವೇಶದ ವೇಳೆ ಈಗಲೂ ಜಾತಿಯೇ ಪ್ರಮುಖ ನಮೂನೆ ಆಗುತ್ತಿದೆ. ಶಿಕ್ಷಣ ಸಂಸ್ಥೆಗಳ ಆವರಣಗಳಲ್ಲಿ ದಲಿತ ಯುವ ಸಮುದಾಯಗಳ ವಾಸ್ತವ ಸ್ಥಿತಿ ಬದಲಾಗಿಲ್ಲ. ಸದ್ಯ ದೇಶಕ್ಕೆ ಜಾತಿ ತಾರತಮ್ಯ ನಿವಾರಣಾ ಕಾಯ್ದೆಯ(ರೋಹಿತ್ ವೇಮುಲ ಕಾಯ್ದೆ) ಅಗತ್ಯವಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಹೇಳಿದ್ದಾರೆ.

ADVERTISEMENT

ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಟ್ರಂಪ್ ಯತ್ನಕ್ಕೆ ಡೆನ್ಮಾರ್ಕ್ ವಿರೋಧ

ಕೋಪೆನ್‌ಹೆಗನ್‌: ಗ್ರೀನ್‌ಲ್ಯಾಂಡ್‌ ಅನ್ನು ವಶಪಡಿಸಿಕೊಳ್ಳುವ ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಯತ್ನವನ್ನು ವಿರೋಧಿಸಿ ಸಾವಿರಾರು ಜನರು ಡೆನ್ಮಾರ್ಕ್‌ನ ರಾಜಧಾನಿ ಕೋಪೆನ್‌ಹೆಗನ್‌ನಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಗ್ರೀನ್‌ಲ್ಯಾಂಡ್‌ ಅನ್ನು ವಶಕ್ಕೆ ಪಡೆಯುವ ತನ್ನ ನಿರ್ಧಾರಕ್ಕೆ ಬೆಂಬಲ ನೀಡದ ದೇಶಗಳಿಗೆ ಸುಂಕ ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಎಚ್ಚರಿಕೆ ನೀಡಿದ ಬೆನ್ನಲ್ಲೇ ಡೆನ್ಮಾರ್ಕ್‌ ಮತ್ತು ಗ್ರೀನ್‌ಲ್ಯಾಂಡ್‌ನಲ್ಲಿ ಪ್ರತಿಭಟನೆ ಆರಂಭಗೊಂಡಿತು.

ಸೂರ್ಯಕುಮಾರ್ ಬಗ್ಗೆ ಹೇಳಿಕೆ: ನಟಿ ಖುಷಿ ಮುಖರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ

ನಟಿ, ರೂಪದರ್ಶಿ ಖುಷಿ ಮುಖರ್ಜಿ ಅವರು ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ನೀಡಿರುವ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಸೂರ್ಯಕುಮಾರ್ ಯಾದವ್ ಅವರು ಈ ಹಿಂದೆ ನನಗೆ ಆಗಾಗ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ಹೇಳಿಕೊಂಡಿದ್ದ ನಟಿ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.

BBK12: ರಿವೀಲ್ ಆಯ್ತು ಬಿಗ್‌ಬಾಸ್‌ ವಿಜೇತ ಗಳಿಸಿದ ದಾಖಲೆಯ ವೋಟಿಂಗ್‌

ಕಿಚ್ಚ ಸುದೀಪ್

ಕನ್ನಡ ಬಿಗ್​ಬಾಸ್ ಸೀಸನ್ 12 ವಿಜೇತರಾಗುವ ಸ್ಪರ್ಧಿಗೆ​ ಬರೋಬ್ಬರಿ 37 ಕೋಟಿಗೂ ಅಧಿಕ ಮತಗಳು ಬಂದಿವೆ ಎಂದು ಕಿಚ್ಚ ಸುದೀಪ್‌ ಅವರು ವೇದಿಕೆ ಮೇಲೆ ಬಹಿರಂಗಪಡಿಸಿದ್ದಾರೆ. ವಿನ್ನರ್‌ ಪಡೆದ ಮತಗಳ ಸಂಖ್ಯೆ ನೋಡಿ ಫೈನಲಿಸ್ಟ್‌ಗಳು ಅಚ್ಚರಿಗೊಂಡಿದ್ದಾರೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಪ್ರೋಮೊದಲ್ಲಿ ವಾರದ ಪಂಚಾಯಿತಿ ನಡೆಸಲು ಸುದೀಪ್ ಅವರು ಬಿಗ್‌ಬಾಸ್‌ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ವಿನ್ನರ್‌ ಪಡೆದ ದಾಖಲೆಯ ವೋಟಿಂಗ್‌ ಅನ್ನು ರಿವೀಲ್‌ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಮೊದಲ ಮತ್ತು ಎರಡನೇ ಸ್ಥಾನಗಳ ನಡುವೆ ಅತಿ ಕಡಿಮೆ ಮತಗಳ ಅಂತರವಿದೆ ಎಂದು ತಿಳಿಸಿದ್ದಾರೆ.

ಕೆಎಫ್‌ಡಿ: ಡೆಪಾ ತೈಲ ಖರೀದಿಗೆ ಅನುಮೋದನೆ

ಕಾಡಿನಲ್ಲಿ ಕೆಎಫ್‌ಡಿ ವೈರಸ್‌ ವಾಹಕ ಉಣುಗುಗಳು

ಬೆಂಗಳೂರು: ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ನಿಯಂತ್ರಣಕ್ಕೆ ಅಗತ್ಯವಿರುವ ಡೆಪಾ ತೈಲ ಖರೀದಿಗೆ ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ. ಕೆಎಫ್‌ಡಿ ಸೋಂಕನ್ನು ತಡೆಗಟ್ಟಲು ಯಾವುದೇ ಲಸಿಕೆ ಲಭ್ಯವಿಲ್ಲ. ಸೋಂಕಿನ ಅಪಾಯ ಕಡಿಮೆ ಮಾಡಲು ಡೆಪಾ ತೈಲ ಸಹಕಾರಿ. ಸದ್ಯ ಡೆಪಾ ತೈಲದ 2.78 ಲಕ್ಷ ಬಾಟಲಿಗಳು ಲಭ್ಯವಿದೆ. ಈ ದಾಸ್ತಾನು ಫೆಬ್ರುವರಿ ಎರಡನೇ ವಾರದವರೆಗೆ ವಿತರಿಸಬಹುದಾಗಿದೆ.

ದ್ವಿತೀಯ ಪಿಯುಸಿ: ಜ.19ರಿಂದ 2ನೇ ಪೂರ್ವಸಿದ್ಧತಾ ಪರೀಕ್ಷೆ

ಬೆಂಗಳೂರು: ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಎರಡನೇ ಪೂರ್ವಸಿದ್ಧತಾ ಪರೀಕ್ಷೆ ಜ.19ರಿಂದ ಆರಂಭವಾಗಲಿದ್ದು, ಫೆ.2ರವರೆಗೆ ನಡೆಯಲಿವೆ. ಜ.2ರಿಂದ 17ರವರೆಗೆ ಮೊದಲ ಪೂರ್ವಸಿದ್ಧತಾ ಪರೀಕ್ಷೆ ನಡೆದಿತ್ತು. ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳೆ ಕೆಲ ವಿಷಯಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಹಾಗಾಗಿ, ಪಿಯು ಎರಡನೇ ಪರೀಕ್ಷೆಯನ್ನು ಕಟ್ಟುನಿಟಾಗಿ ನಡೆಸಲು ಪದವಿಪೂರ್ವ ಶಿಕ್ಷಣ ನಿರ್ದೇಶನಾಲಯ ಸೂಚನೆ ನೀಡಿದೆ. 

ಅಕ್ರಮ ವಲಸಿಗರ ನುಸುಳುವಿಕೆ ಬಂಗಾಳಕ್ಕೆ ದೊಡ್ಡ ಸವಾಲು: ಪ್ರಧಾನಿ ಮೋದಿ ವಾಗ್ದಾಳಿ

ಪಶ್ಚಿಮ ಬಂಗಾಳದ ಮಾಲದಾ ಜಿಲ್ಲೆಯಲ್ಲಿ ಬಿಜೆಪಿ ಶನಿವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು

ಮಾಲದಾ: ‘ಅಕ್ರಮ ವಲಸಿಗರ ನುಸುಳುವಿಕೆಯಿಂದಾಗಿ ಪಶ್ಚಿಮ ಬಂಗಾಳದ ಜನಸಂಖ್ಯೆಯ ಸ್ವರೂಪವೇ ಬದಲಾಗಿದೆ. ಆಡಳಿತ ಪಕ್ಷದ ‘ಪೋಷಣೆ ಮತ್ತು ಸಿಂಡಿಕೇಟ್‌ ರಾಜ್‌’ನಿಂದಾಗಿ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇಲ್ಲಿ ಶನಿವಾರ ಆಯೋಜಿಸಿದ್ದ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ‘ಬಂಗಾಳಕ್ಕೆ ಒಳನುಸುಳುವಿಕೆಯು ದೊಡ್ಡ ಸವಾಲಾಗಿದೆ. ಜಗತ್ತಿನಾದ್ಯಂತ ಶ್ರೀಮಂತ ರಾಷ್ಟ್ರಗಳು ಸಹ ಅಕ್ರಮ ವಲಸಿಗರನ್ನು ಪತ್ತೆ ಮಾಡಿ ಗಡೀಪಾರು ಮಾಡಲು ದೃಢ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ’ ಎಂದು ಪ್ರತಿಪಾದಿಸಿದರು.

ಅಜೀಂ ಪ್ರೇಮ್ ಜಿ ಪ್ರತಿಷ್ಠಾನದ ಆಸ್ಪತ್ರೆಗೆ 5 ವರ್ಷಗಳಲ್ಲಿ ₹4,000 ಕೋಟಿ: ಸಿಎಂ

ಬೆಂಗಳೂರು: ‘ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿರುವ 10 ಎಕರೆ ಜಮೀನಿನಲ್ಲಿ ನಿರ್ಮಾಣವಾಗಲಿರುವ ಸಾವಿರ ಆಸ್ಪತ್ರೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆಗೆ ಅಜೀಂ ಪ್ರೇಮ್ ಜಿ ಪ್ರತಿಷ್ಠಾನವು ಐದು ವರ್ಷಗಳಲ್ಲಿ ₹ 4 ಸಾವಿರ ಕೋಟಿ ವೆಚ್ಚ ಮಾಡಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಐಸಿಐಸಿಐ ಲಾಭ ಇಳಿಕೆ, ಎಚ್‌ಡಿಎಫ್‌ಸಿ ಏರಿಕೆ

ಐಸಿಐಸಿಐ ಗೃಹ ಸಾಲ ಬಡ್ಡಿ ದರ ಇಳಿಕೆ

ಮುಂಬೈ: ಖಾಸಗಿ ವಲಯದ ಎರಡನೆಯ ಅತಿದೊಡ್ಡ ಬ್ಯಾಂಕ್‌ ಆಗಿರುವ ಐಸಿಐಸಿಐ ಬ್ಯಾಂಕ್‌ನ ಡಿಸೆಂಬರ್ ತ್ರೈಮಾಸಿಕದ ಫಲಿತಾಂಶವು ಶೇ 2.68ರಷ್ಟು ಕಡಿಮೆ ಆಗಿ ₹12,537 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಐಸಿಐಸಿಐ ಬ್ಯಾಂಕ್‌ ₹12,883 ಕೋಟಿ ಲಾಭ ಗಳಿಸಿತ್ತು. ಈ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಲಾಭ ₹13,537 ಕೋಟಿ ಆಗಿತ್ತು. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಡಿಸೆಂಬರ್‌ ತ್ರೈಮಾಸಿಕದ ಲಾಭವು ಶೇ 12.17ರಷ್ಟು ಹೆಚ್ಚಳ ಕಂಡಿದ್ದು ₹19,807 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್‌ ₹17,657 ಕೋಟಿ ಲಾಭ ಕಂಡಿತ್ತು. ಈ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಬ್ಯಾಂಕ್‌ ₹19,611 ಕೋಟಿ ಲಾಭ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.