ADVERTISEMENT

ವಿರೋಧ ಪಕ್ಷದವರನ್ನು ಗುರಿಯಾಗಿಸಿ ಬಿಜೆಪಿ ಟೂಲ್‌ಕಿಟ್ ಬಳಸುತ್ತಿದೆ: ಸಂಜಯ್ ರಾವುತ್

ಪಿಟಿಐ
Published 25 ಮೇ 2021, 10:06 IST
Last Updated 25 ಮೇ 2021, 10:06 IST
ಸಂಜಯ್‌ ರಾವತ್‌
ಸಂಜಯ್‌ ರಾವತ್‌   

ಮುಂಬೈ: ವಿರೋಧ ಪಕ್ಷದವರನ್ನು ಗುರಿಯಾಗಿಸಿಕೊಂಡು ಬಿಜೆಪಿಯೇ ಸಾಮಾಜಿಕ ಜಾಲತಾಣ ಅಥವಾ ‘ಟೂಲ್‌ಕಿಟ್’ ಅನ್ನು ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಶಿವಸೇನಾ ಸಂಸದ ಸಂಜಯ್‌ ರಾವುತ್‌ ಆರೋಪಿಸಿದ್ದಾರೆ.

ಬಿಜೆಪಿಯು ಟೀಕೆಗಳಿಗೆ ಒಳಗಾದಾಗ ಈ ರೀತಿಯ ಒತ್ತಡ ತಂತ್ರಗಳನ್ನು ಅನುಸರಿಸುತ್ತದೆ. ಇತ್ತೀಚೆಗೆ ಟ್ವಿಟರ್‌ ಇಂಡಿಯಾ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಅವರ ಟ್ವೀಟ್‌ ಒಂದಕ್ಕೆ ‘ತಿರುಚಲಾದ ಮಾಹಿತಿ’ ಎಂದು ಹಣೆಪಟ್ಟಿ ನೀಡಿತ್ತು. ಈ ಪ್ರಕರಣ ನಡೆದ ಬಳಿಕ ದೆಹಲಿ ಪೊಲೀಸರು ‘ಕೋವಿಡ್‌ ಟೂಲ್‌ಕಿಟ್‌’ ಶಂಕೆಯ ಮೇಲೆ ಟ್ವಿಟರ್‌ ಇಂಡಿಯಾ ಮೇಲೆ ದಾಳಿ ನಡೆಸಿತ್ತು.

‘ಸಾಮಾಜಿಕ ಜಾಲತಾಣ ಮತ್ತು ಟೂಲ್‌ಕಿಟ್‌ಗಳನ್ನು ಬಳಸಿದ್ದು ಬಿಜೆಪಿ. ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಯಲು ಶುರುವಾದ ಬಳಿಕ, ಹಲವಾರು ವಿಧಾನಗಳ ಮೂಲಕ ಜನರನ್ನು ಕಟ್ಟಿಹಾಕಲು ನೋಡುತ್ತಿದೆ. ಟೂಲ್‌ಕಿಟ್‌ ಕುರಿತು ಪ್ರಪಂಚದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ನಾವು ಇದನ್ನೆಲ್ಲಾ ನೋಡಿ ಮನೋರಂಜನೆ ಪಡೆಯುತ್ತಿದ್ದೇವೆ‘ ಎಂದು ಅವರು ಹೇಳಿದರು.

ADVERTISEMENT

ಕೋವಿಡ್‌–19 ಸಂಕಷ್ಟ ಬಿಜೆಪಿ ಮೇಲೆ ಮತ್ತು ಮುಂಬರುವ ಚುನಾವಣೆಗಳ ಮೇಲೆ ಹೇಗೆ ಪರಿಣಾಮ ಬೀರಬಲ್ಲದು ಎಂಬುದನ್ನು ಆರ್‌ಎಸ್‌ಎಸ್‌ ಜೊತೆ ಬಿಜೆಪಿ ಚರ್ಚಿಸುತ್ತಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕುರಿತು ಬಹಳ ಗೌರವವಿದೆ. ಗಂಗಾ ನದಿಯಲ್ಲಿ ಸಾವಿರಾರು ಹೆಣಗಳು ತೇಲುತ್ತಿದ್ದ ಕುರಿತು ಅವರು ಪ್ರತಿಕ್ರಿಯೆ ನೀಡುತ್ತಾರೆ ಎಂದು ನಿರೀಕ್ಷಿಸಿದ್ದೆ. ಶವಗಳು ತೇಲಿ ಬಂದಿದ್ದು ರಾಮ ಮಂದಿರ ವಿಚಾರದಷ್ಟೇ ಪ್ರಮುಖ ವಿಷಯವಾಗಿದೆ ಎಂದರು.

ವಿಧಾನ ಪರಿಷತ್‌ಗೆ 12 ಸದಸ್ಯರ ನಾಮನಿರ್ದೇಶನ ಮಾಡುವ ಪಟ್ಟಿಗೆ ರಾಜ್ಯಪಾಲರು ಇನ್ನೂ ಅಂಕಿತ ಹಾಕದ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ರಾಜ್ಯ ಸಚಿವ ಸಂಪುಟ ಅವಿರೋಧವಾಗಿ 12 ಸದಸ್ಯರ ಪಟ್ಟಿಯನ್ನು ತಯಾರಿಸಿ ರಾಜ್ಯಪಾಲರಿಗೆ ನವೆಂಬರ್‌ನಲ್ಲಿಯೇ ನೀಡಿದೆ. ಆದರೆ ನಾಮನಿರ್ದೇಶನದ ಪಟ್ಟಿ ರಾಜಭವನದಲ್ಲಿ ಇಲ್ಲ ಎನ್ನಲಾಗಿದೆ. ಆ ಕಡತವನ್ನು ಯಾವುದೇ ದೆವ್ವ ಬಂದು ಕದ್ದು ಹೋಗಿಲ್ಲ ಎಂದು ನಾನು ಭಾವಿಸುತ್ತೇನೆ. ರಾಜ್ಯಪಾಲರು ಕಡತಕ್ಕೆ ಅಂಕಿತ ಹಾಕಿದರೆ ನಾನು ಸಿಹಿ ಹಂಚುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.