ADVERTISEMENT

New Year 2025 | ಹೊಸ ವರ್ಷಾಚರಣೆಗೆ ಗೋವಾದ ಕಡಲತೀರಗಳು ಸಜ್ಜು

ಪಿಟಿಐ
Published 28 ಡಿಸೆಂಬರ್ 2024, 11:26 IST
Last Updated 28 ಡಿಸೆಂಬರ್ 2024, 11:26 IST
<div class="paragraphs"><p>ಸಂಗ್ರಹ ಚಿತ್ರ</p></div>

ಸಂಗ್ರಹ ಚಿತ್ರ

   

ಪಿಟಿಐ ಚಿತ್ರ 

ಪಣಜಿ: ಹೊಸ ವರ್ಷದ ಆಚರಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದೆ. ವರ್ಷಾಂತ್ಯದಲ್ಲಿ ಗೋವಾದ ಕಡಲತೀರಗಳಿಗೆ ಜನರ ಭೇಟಿ ಹೆಚ್ಚಾಗಿದ್ದು, ಕಡಲತೀರಗಳು ಪ್ರವಾಸಿಗರ ಆಕರ್ಷಣೀಯ ತಾಣವಾಗಿವೆ.

ADVERTISEMENT

ಕ್ರಿಸ್‌ಮಸ್‌ ನಂತರ ಗೋವಾದ ಬೀಚ್‌ಗಳಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಹೊಸ ವರ್ಷ ಸಂಭ್ರಮಾಚರಣೆಗೆ ಜನರು ಸಿದ್ಧಗೊಳ್ಳುತ್ತಿದ್ದಾರೆ. ವಿವಿಧ ರಾಜ್ಯಗಳಿಂದ ಜನರು ಸೇರಿದಂತೆ ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.

ಕಡಲತೀರಗಳಲ್ಲಿ ಜನರು ತಮ್ಮ ಕುಟುಂಬ, ಸ್ನೇಹಿತರೊಂದಿಗೆ ಕಾಲ ಕಳೆಯಲು ಬಯಸುತ್ತಾರೆ. ಕಲಂಗುಟ್, ಕ್ಯಾಂಡೋಲಿಮ್, ಬಾಗಾ, ಅಂಜುನಾ ಮತ್ತು ಮಾಂಡ್ರೆಮ್ ಬೀಚ್‌ಗಳು ಉತ್ತರ ಗೋವಾದ ಅತ್ಯಂತ ಮೆಚ್ಚಿನ ಪ್ರವಾಸಿ ತಾಣಗಳಾಗಿವೆ.

'ಸೂರ್ಯಾಸ್ತದ ನಂತರ, ಗೋವಾದ ಕಡಲತೀರಗಳಲ್ಲಿನ ಹೋಟೆಲ್‌ಗಳಲ್ಲಿ ತಂಗಲು ಇಷ್ಟಪಡುತ್ತೇವೆ. ಈ ಪರಿಸರವನ್ನು ಆನಂದಿಸುವುದು ಹಾಗೂ ಬೀಚ್‌ಗಳಲ್ಲಿ ಹೊಸವರ್ಷಾಚರಣೆ ಬರಮಾಡಿಕೊಳ್ಳುವುದು ಖುಷಿಯಾಗುತ್ತದೆ' ಎಂದು ಪ್ರವಾಸಿಯೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ.

'ಕಳೆದ ಏಳು ವರ್ಷಗಳಿಂದ ನಾನು ಇಲ್ಲಿಗೆ ಬರುತ್ತಿದ್ದೇನೆ. ನಾವು ಕ್ರಿಸ್‌ಮಸ್‌ಗೆ ಮೊದಲು ಇಲ್ಲಿಗೆ ತಲುಪುತ್ತೇವೆ. ಹೊಸ ವರ್ಷವನ್ನು ಆಚರಿಸಿ ನಂತರ ಹಿಂದಿರುಗುತ್ತೇವೆ' ಎಂದು ಮಹಾರಾಷ್ಟ್ರದ ಸತಾರಾದ ಪ್ರವಾಸಿ ರಾಜಾರಾಂ ಮಾನೆ ತಿಳಿಸಿದ್ದಾರೆ.

'ಗೋವಾದ ಪ್ರವಾಸೋದ್ಯಮದ ಹಾಗೂ ಇಲ್ಲಿನ ವ್ಯವಸ್ಥೆ ಬಗ್ಗೆ ಅಪಪ್ರಚಾರದ ನಡುವೆಯೂ ಜನರು ಗೋವಾಗೆ ಭೇಟಿ ನೀಡುವುದನ್ನು ಇಷ್ಟಪಡುತ್ತಾರೆ. ಈ ವರ್ಷವು ಅಧಿಕ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ. ಪಂಚತಾರಾ ಹೋಟೆಲ್‌ಗಳು ಸೇರಿದಂತೆ ಎಲ್ಲಾ ಹೋಟೆಲ್‌ಗಳು ಭಾಗಶಃ ಬುಕ್‌ ಆಗಿದೆ. ಗೋವಾದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದರಿಂದ ಯಾವುದೇ ಪ್ರಯೋಜನವಿಲ್ಲ' ಎಂದು ಗೋವಾ ಪ್ರವಾಸೋದ್ಯಮ ಸಚಿವ ರೋಹನ್ ಖೌಂಟೆ ಹೇಳಿದ್ದಾರೆ.

'ಪ್ರವಾಸಿಗರಿಗೆ ವಿಶೇಷ ಸೌಲಭ್ಯವನ್ನು ಒದಗಿಸಲಾಗಿದ್ದು, ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಹಿರಿಯ ಅಧಿಕಾರಿಗಳು ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಸೂಕ್ತ ಭದ್ರತೆಯನ್ನು ಕೈಗೊಳ್ಳಲಾಗಿದೆ' ಎಂದು ಗೋವಾ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.