ADVERTISEMENT

ದೇಶದಲ್ಲಿ ಬಿಜೆಪಿ ವಿರೋಧಿ ಅಲೆ: ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಪಿಟಿಐ
Published 14 ಜುಲೈ 2024, 4:28 IST
Last Updated 14 ಜುಲೈ 2024, 4:28 IST
ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ   

ಕೋಲ್ಕತ್ತ: ದೇಶದಾದ್ಯಂತ ಬಿಜೆಪಿ ವಿರೋಧಿ ಅಲೆ ಈಗ ಟ್ರೆಂಡ್‌ ಇದೆ ಎಂಬುದನ್ನು ವಿಧಾನಸಭೆ ಉಪಚುನಾವಣೆ ಫಲಿತಾಂಶ ತೋರಿಸಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೋಲ್ಕತ್ತದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಾದ್ಯಂತ ಬಿಜೆಪಿ ವಿರೋಧಿ ಅಲೆ ಈಗ ಟ್ರೆಂಡ್‌ ಇದೆ’ ಎಂದು ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಪೂರ್ಣಾವಧಿಯಲ್ಲಿ ಉಳಿಯುವುದಿಲ್ಲ ಎಂಬುದನ್ನು ಸೂಚಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಟ್ರೆಂಡ್‌ ತುಂಬಾ ಸ್ಪಷ್ಟವಾಗಿದೆ. ಈ ಹಿಂದೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಜನಾದೇಶ ಎನ್‌ಡಿಎ ಪರವಾಗಿ ಇರಲಿಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

ಒಟ್ಟು 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಪಶ್ಚಿಮ ಬಂಗಾಳದಲ್ಲಿ 4, ಹಿಮಾಚಲ ಪ್ರದೇಶ 3, ಉತ್ತರಾಖಂಡ 2, ಪಂಜಾಬ್‌, ಮಧ್ಯ ಪ್ರದೇಶ, ಬಿಹಾರ ಮತ್ತು ತಮಿಳುನಾಡಿನಲ್ಲಿ ತಲಾ 1 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಮೈತ್ರಿಕೂಟವು ಶೇ 51ರಷ್ಟು ಮತಗಳನ್ನು ಪಡೆದಿದೆ. ಎನ್‌ಡಿಎ ಶೇ 46 ರಷ್ಟು ಮತಗಳನ್ನು ಪಡೆದಿದೆ ಎಂದು ಮಮತಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ನಾಲ್ಕು ಕ್ಷೇತ್ರಗಳಲ್ಲಿಯೂ ಟಿಎಂಸಿಯನ್ನು ಗೆಲ್ಲಿಸಿದ್ದಕ್ಕಾಗಿ ಜನರಿಗೆ ಧನ್ಯವಾದ ತಿಳಿಸಿದ ಬ್ಯಾನರ್ಜಿ, ರಾಜಸ್ಥಾನ ಮತ್ತು ಮಧ್ಯ ಪ್ರದೇಶ ಹೊರತುಪಡಿಸಿ ಇತರ ರಾಜ್ಯಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

7 ರಾಜ್ಯಗಳ 13 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ 10 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿ 2 ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜುಲೈ 10ರಂದು ಉಪಚುನಾಚಣೆ ನಡೆದಿತ್ತು. ನಿನ್ನೆ (ಶನಿವಾರ) ಎಲ್ಲ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.