ಮನಮೋಹನ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಪ್ರಧಾನಿ ನರೇಂದ್ರ ಮೋದಿ ಅಂತಿಮ ನಮನ ಸಲ್ಲಿಸಿದರು
–ಪಿಟಿಐ ಚಿತ್ರ
ನವದೆಹಲಿ: ಭಾರತದ ಆರ್ಥಿಕತೆಗೆ ಹೊಸ ದಿಕ್ಕು ತೋರಿದ, ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರು ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿದರು.
ತ್ರಿವರ್ಣ ಧ್ವಜ ಹೊದಿಸಿರುವ ಮೃತದೇಹಕ್ಕೆ ಪ್ರಮುಖ ರಾಜಕೀಯ ನಾಯಕರು ಪಕ್ಷಭೇದ ಮರೆತು ಅಂತಿಮ ನಮನ ಸಲ್ಲಿಸಿದರು. ಭಾರತದ ಆರ್ಥಿಕ ಸುಧಾರಣೆಗಳ ಹರಿಕಾರ ಎಂದೇ ಖ್ಯಾತರಾದ ಮನಮೋಹನ ಸಿಂಗ್ (92) ಅವರು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಎಐಐಎಂಎಸ್) ಗುರುವಾರ ರಾತ್ರಿ ನಿಧನರಾಗಿದ್ದರು.
ಮೃತದೇಹವನ್ನು ದೆಹಲಿಯ ಲುಟೆನ್ಸ್ ಪ್ರದೇಶದ, ಮೋತಿಲಾಲ್ ನೆಹರೂ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಇಡಲಾಗಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಶನಿವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದರು.
‘ನಿಗಮ್‌ಬೋಧ್ ಘಾಟ್ ಸ್ಮಶಾನದಲ್ಲಿ ಬೆಳಿಗ್ಗೆ 11.45ಕ್ಕೆ ಅಂತ್ಯಕ್ರಿಯೆ ನಡೆಸಲು ಸರ್ಕಾರ ನಿರ್ಧರಿಸಿದೆ’ ಎಂದು ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಉಪರಾಷ್ಟ್ರಪತಿ ಜಗದೀಪ್ ಧನಕರ್, ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸ್ಪೀಕರ್ ಓಂ ಬಿರ್ಲಾ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಾದ ಎಂ.ಕೆ.ಸ್ಟಾಲಿನ್, ಎನ್.ಚಂದ್ರಬಾಬು ನಾಯ್ಡು, ರೇವಂತ ರೆಡ್ಡಿ ಮತ್ತು ಆತಿಶಿ ಅವರು ಶ್ರದ್ಧಾಂಜಲಿ ಸಲ್ಲಿಸಿದರು. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ಅವರೂ ಸಿಂಗ್ ನಿವಾಸದಲ್ಲಿ ಹಾಜರಿದ್ದರು.
ಮನಮೋಹನ ಅವರ ನಿಧನವು ರಾಷ್ಟ್ರಕ್ಕೆ ದೊಡ್ಡ ನಷ್ಟ ಎಂದು ಬಣ್ಣಿಸಿರುವ ಮೋದಿ, ಜನರ ಮತ್ತು ದೇಶದ ಅಭಿವೃದ್ಧಿಯೆಡೆಗೆ ಅವರು ಹೊಂದಿದ್ದ ಬದ್ಧತೆಯನ್ನು ಯಾವಾಗಲೂ ಗೌರವಿಸಲಾಗುವುದು ಎಂದು ಹೇಳಿದರು.
ಸಿಂಗ್ ಅವರ ಜೀವನ ಪಯಣವನ್ನು ತಮ್ಮ ವಿಡಿಯೊ ಸಂದೇಶದಲ್ಲಿ ಪ್ರಧಾನಿ ನೆನಪಿಸಿಕೊಂಡಿದ್ದು, ‘ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಹುಟ್ಟಿದ ಸಿಂಗ್ ಅವರು ದೇಶ ವಿಭಜನೆಯ ಬಳಿಕ ಎಲ್ಲವನ್ನೂ ಬಿಟ್ಟು ಕುಟುಂಬದ ಜತೆ ಭಾರತಕ್ಕೆ ಬಂದರು. ಅಂದಿನಿಂದ ಅವರು ಮಾಡಿರುವ ಸಾಧನೆ ಅಸಾಧಾರಣವೇ ಸರಿ’ ಎಂದಿದ್ದಾರೆ.
ಸಿಂಗ್ ಅವರು ದೇಶಕ್ಕೆ ನೀಡಿರುವ ಕೊಡುಗೆಯನ್ನು ಯಾವಾಗಲೂ ಸ್ಮರಿಸಲಾಗುವುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಸಂತಾಪ ಸೂಚಕ ನಿರ್ಣಯ: ಮೋದಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಎರಡು ನಿಮಿಷಗಳ ಮೌನ ಆಚರಿಸಿ, ಸಿಂಗ್ ಅವರ ಸ್ಮರಣಾರ್ಥ ಸಂತಾಪ ಸೂಚಕ ನಿರ್ಣಯವನ್ನು ಅಂಗೀಕರಿಸಲಾಯಿತು.
ಮನಮೋಹನ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೌರವ ಸಲ್ಲಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಂಗ್ ಅವರ ಕುಟುಂಬದ ಸದಸ್ಯರು ಇದ್ದಾರೆ
ಎಐಸಿಸಿ ಕಚೇರಿಯಿಂದ ಅಂತಿಮ ಯಾತ್ರೆ
ಮನಮೋಹನ ಸಿಂಗ್ ಅವರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ನವದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಿಂದ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು ಎಂದು ಕೆ.ಸಿ.ವೇಣುಗೋಪಾಲ್ ಶುಕ್ರವಾರ ತಿಳಿಸಿದರು.
‘ಡಿಸೆಂಬರ್ 28 (ಶನಿವಾರ) ಬೆಳಿಗ್ಗೆ 8ಕ್ಕೆ ಮೃತದೇಹವನ್ನು ಅವರ ನಿವಾಸದಿಂದ ಎಐಸಿಸಿ ಕಚೇರಿಗೆ ತರಲಾಗುವುದು. 8.30ರಿಂದ 9.30ರ ವರೆಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ಆ ಬಳಿಕ ಅಂತ್ಯಕ್ರಿಯೆಗಾಗಿ ಎಐಸಿಸಿ ಕಚೇರಿಯಿಂದ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.