ADVERTISEMENT

ತ್ರಿಪುರಾ ಫಲಿತಾಂಶ: ಬಿಜೆಪಿಗೆ ಪ್ರಚಂಡ ಗೆಲುವು – ಟಿಎಂಸಿ, ಸಿಪಿಎಂಗೆ ಮುಖಭಂಗ

14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ * 334ರಲ್ಲಿ 329 ಸ್ಥಾನಗಳು ಬಿಜೆಪಿ ಪಾಲು

ಪಿಟಿಐ
Published 28 ನವೆಂಬರ್ 2021, 16:05 IST
Last Updated 28 ನವೆಂಬರ್ 2021, 16:05 IST
ತ್ರಿಪುರಾದ ಧರ್ಮನಗರ ನಗರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿಗರು ಭಾನುವಾರ ವಿಜಯೋತ್ಸವ ಆಚರಿಸಿದರು –ಪಿಟಿಐ ಚಿತ್ರ
ತ್ರಿಪುರಾದ ಧರ್ಮನಗರ ನಗರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿಗರು ಭಾನುವಾರ ವಿಜಯೋತ್ಸವ ಆಚರಿಸಿದರು –ಪಿಟಿಐ ಚಿತ್ರ   

ಅಗರ್ತಲಾ/ಕೋಲ್ಕತ್ತ: ಹಿಂಸಾಚಾರ ನಡೆದ ಆರೋಪ, ಆಡಳಿತ–ಪ್ರತಿಪಕ್ಷಗಳ ನಡುವೆ ಜಟಾಪಟಿಯಿಂದ ಗಮನ ಸೆಳೆದಿದ್ದ ತ್ರಿಪುರಾದ 14 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭಾನುವಾರ ಪ್ರಚಂಡ ಗೆಲುವು ಸಾಧಿಸಿದೆ.

ಅಗರ್ತಲಾ ಮಹಾನಗರ ಪಾಲಿಕೆ ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 334 ಸ್ಥಾನಗಳ ಪೈಕಿ 329 ಸ್ಥಾನಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದ್ದು, ಟಿಎಂಸಿ ಹಾಗೂ ಸಿಪಿಎಂ ಭಾರಿ ಮುಖಭಂಗ ಅನುಭವಿಸಿವೆ.

ಸಿಪಿಎಂ ಮೂರು ಸ್ಥಾನಗಳಲ್ಲಿ ಗೆದ್ದಿದೆ. ಟಿಎಂಸಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ತಲಾ ಒಂದು ಸ್ಥಾನದಲ್ಲಿ ಗೆಲವು ಸಾಧಿಸಿದ್ದಾರೆ.

ADVERTISEMENT

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಆಡಳಿತ ಚುಕ್ಕಾಣಿ ಹಿಡಿದ ನಂತರ ಬಿಜೆಪಿ ಎದುರಿಸಿದ ಮೊದಲ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಇದಾಗಿದೆ.

ಅಗರ್ತಲಾ ಮಹಾನಗರ ಪಾಲಿಕೆಯ 51 ಸ್ಥಾನಗಳಲ್ಲಿ ವಿರೋಧ ಪಕ್ಷಗಳ ಒಬ್ಬ ಅಭ್ಯರ್ಥಿಯೂ ಗೆದ್ದಿಲ್ಲ. ಖೋವಾಯ್ (15 ಸ್ಥಾನ), ಬೆಲೊನಿಯಾ (17 ಸ್ಥಾನ) ಹಾಗೂ 15 ಸದಸ್ಯಬಲದ ಕುಮಾರಘಾಟ್ ನಗರಸಭೆಗಳು, 9 ಸದಸ್ಯರನ್ನು ಹೊಂದಿರುವ ಸಬ್ರೂಮ್‌ ನಗರ ಪಂಚಾಯಿತಿಗಳ ಎಲ್ಲ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

15 ಸದಸ್ಯ ಬಲದ ಅಂಬಾಸ ನಗರಸಭೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆದ್ದಿದೆ. ಟಿಎಂಸಿ ಹಾಗೂ ಸಿಪಿಎಂ ತಲಾ ಒಂದು ಸ್ಥಾನದಲ್ಲಿ ಗೆದ್ದಿವೆ. ಮತ್ತೊಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ.

ಕೈಲಾಶಹರ ನಗರಸಭೆಯಲ್ಲಿ 16 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದ್ದರೆ, ಸಿಪಿಎಂ ಒಂದು ಸ್ಥಾನ ಗೆದ್ದಿದೆ. ಪಾಣಿಸಾಗರ ನಗರ ಪಂಚಾಯಿತಿಯಲ್ಲಿ ಒಂದು ಸ್ಥಾನದಲ್ಲಿ ಸಿಪಿಎಂ ಗೆದ್ದಿದ್ದರೆ, 12 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ನಗೆಬೀರಿದ್ದಾರೆ.

ಚುನಾವಣಾ ಪ್ರಚಾರ ಆರಂಭಗೊಂಡ ದಿನದಿಂದಲೇ, ರಾಜ್ಯದಲ್ಲಿ ವ್ಯಾಪಕ ಹಿಂಸಾಚಾರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದವು. ಈ ವಿಷಯವಾಗಿ ಬಿಜೆಪಿ ಹಾಗೂ ಟಿಎಂಸಿ ನಡುವೆ ವಾಕ್ಸಮರವೂ ನಡೆದಿತ್ತು. ಒಂದು ಹಂತದಲ್ಲಿ ಟಿಎಂಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿ, ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ಮಧ್ಯಪ್ರವೇಶಿಸುವಂತೆ ಅರ್ಜಿ ಸಲ್ಲಿಸಿತ್ತು.

ವಿಜಯೋತ್ಸವ: ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ, ಬಿಜೆಪಿ ಕಾರ್ಯಕರ್ತರು ಅಗರ್ತಲಾದ ಬೀದಿಗಳಲ್ಲಿ ವಿಜಯೋತ್ಸವ ಆಚರಿಸುವುದು ಕಂಡು ಬಂತು. ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡ ಕಾರ್ಯಕರ್ತರು, ಡೋಲುಗಳನ್ನು ಬಾರಿಸುತ್ತಾ, ಕುಣಿದು ಸಂಭ್ರಮಿಸಿದರು.

ನೆರೆಯ ಪಶ್ಚಿಮ ಬಂಗಾಳದಲ್ಲಿಯೂ ಬಿಜೆಪಿ ಪಾಳೆಯದಲ್ಲಿ ಭಾರಿ ಸಂಭ್ರಮ ಕಂಡುಬಂತು.

***

ತ್ರಿಪುರಾ ಜನರು ಉತ್ತಮ ಆಡಳಿತಕ್ಕೆ ಮಣೆ ಹಾಕುತ್ತಾರೆ ಎಂಬ ಸಂದೇಶವನ್ನು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ರವಾನಿಸಿದೆ

– ನರೇಂದ್ರ ಮೋದಿ, ಪ್ರಧಾನಿ

ಇದು ಐತಿಹಾಸಿಕ ಗೆಲುವು. ಬಿಜೆಪಿಯ ವಿರೋಧಿಗಳಿಗೆ ತ್ರಿಪುರಾ ಜನರು ತಕ್ಕ ಉತ್ತರ ನೀಡಿದ್ದಾರೆ

– ಬಿಪ್ಲವ್ ಕುಮಾರ್ ದೇವ್, ತ್ರಿಪುರಾ ಮುಖ್ಯಮಂತ್ರಿ

ತ್ರಿಪುರಾದಲ್ಲಿ ಟಿಎಂಸಿಗೆ ಅಸ್ತಿತ್ವವೇ ಇರಲಿಲ್ಲ. ಆದಾಗ್ಯೂ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವುದು ಹೆಮ್ಮೆಯ ವಿಷಯ

– ಅಭಿಷೇಕ್ ಬ್ಯಾನರ್ಜಿ, ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.