ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ 'ಸುಳ್ಳುಗಾರ' ಅಂದರೆ ಅಮೆರಿಕದ ಅಧ್ಯಕ್ಷರು ಸತ್ಯಾಂಶವನ್ನು ಬಯಲು ಮಾಡಲಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಂದರ್ಭದಲ್ಲಿ ಭಾರತ ಹಾಗೂ ಪಾಕ್ ನಡುವೆ ಕದನ ವಿರಾಮಕ್ಕೆ ವಿಶ್ವದ ಯಾವುದೇ ನಾಯಕ ಮಧ್ಯಸ್ಥಿಕೆ ವಹಿಸಿರಲಿಲ್ಲ ಎಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು.
'ಆದರೆ ಟ್ರಂಪ್ ಸುಳ್ಳುಗಾರ ಎಂದು ಎಲ್ಲಿಯೂ ಪ್ರಧಾನಿ ಮೋದಿ ಹೇಳಿಲ್ಲ. ಒಂದು ವೇಳೆ ಸುಳ್ಳಗಾರನೆಂದು ಹೇಳಿದರೆ ಟ್ರಂಪ್ ಎಲ್ಲ ಸತ್ಯಾಂಶಗಳನ್ನು ಬಯಲು ಮಾಡಲಿದ್ದಾರೆ' ಎಂದು ರಾಹುಲ್ ಹೇಳಿದ್ದಾರೆ.
ಆಪರೇಷನ್ ಸಿಂಧೂರ ವಿಷಯಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹೇಳಿಕೆಯ ಬಳಿಕವೂ ವ್ಯಾಪಾರ ವಿಷಯವನ್ನು ಮುಂದಿಟ್ಟುಕೊಂಡು ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಮಾಡಿಕೊಳ್ಳಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ.
ಈ ಕುರಿತು ಸಂಸತ್ತಿನ ಆವರಣದಲ್ಲಿ ರಾಹುಲ್ ಗಾಂಧಿ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ, 'ಈ ವಿಷಯ ಎಲ್ಲರಿಗೂ ಗೊತ್ತಿದೆ. ಪ್ರಧಾನಿ ಅವರಿಂದ ಬಹಿರಂಗ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಹೇಳಿದರೆ ಟ್ರಂಪ್ ಎಲ್ಲ ಸತ್ಯಗಳನ್ನು ಬಹಿರಂಗ ಮಾಡಲಿದ್ದಾರೆ' ಎಂದು ಹೇಳಿದ್ದಾರೆ.
'ಡೊನಾಲ್ಡ್ ಟ್ರಂಪ್ ವ್ಯಾಪಾರ ಒಪ್ಪಂದವನ್ನು ಬಯಸುತ್ತಿದ್ದಾರೆ. ಅದಕ್ಕಾಗಿಯೇ ಪದೇ ಪದೇ ತಮ್ಮ ಹೇಳಿಕೆಯನ್ನು ಪುನರಾವರ್ತಿಸುತ್ತಿದ್ದಾರೆ. ಅಲ್ಲಿ ಅವರು ಒತ್ತಡವನ್ನು ಹೇರಲಿದ್ದಾರೆ. ವ್ಯಾಪಾರ ಒಪ್ಪಂದ ಹೇಗೆ ನಡೆಯುತ್ತದೆ ಎಂದು ನೀವೇ ನೋಡಿ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.