ADVERTISEMENT

ತಿರುಮಲ: ಲಡ್ಡು ಸ್ವೀಕರಿಸಲು ಕಿಯೋಸ್ಕ್‌ ಯಂತ್ರ ಪರಿಚಯಿಸಿದ ಟಿಟಿಡಿ

ಪಿಟಿಐ
Published 24 ಜೂನ್ 2025, 6:08 IST
Last Updated 24 ಜೂನ್ 2025, 6:08 IST
   

ತಿರುಪತಿ (ಆಂಧ್ರಪ್ರದೇಶ): ಲಡ್ಡು ಖರೀದಿ ಪಾವತಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ನಿರ್ಧರಿಸಿರುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ಲಡ್ಡು ಕೌಂಟರ್‌ಗಳಲ್ಲಿ ಕಿಯೋಸ್ಕ್‌ ಯಂತ್ರಗಳನ್ನು ಪರಿಚಯಿಸಿದೆ ಎಂದು ಮೂಲಗಳು ತಿಳಿಸಿವೆ.

ತಿರುಮಲದ ವಿವಿಧ ಲಡ್ಡು ಕೌಂಟರ್‌ಗಳಲ್ಲಿ ಈ ಯಂತ್ರಗಳನ್ನು ಇರಿಸಲಾಗಿದ್ದು, ಭಕ್ತರು ಹೆಚ್ಚುವರಿ ಲಡ್ಡು ಬೇಕಾದಲ್ಲಿ ಯುಪಿಐ ಮೂಲಕ ಹಣ ಪಾವತಿಸಿ ರಶೀದಿ ಪಡೆಯಬೇಕು ಎಂದು ಟಿಟಿಡಿ ಸೋಮವಾರ ರಾತ್ರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ದೇಗುಲಕ್ಕೆ ಆಗಮಿಸುವ ಭಕ್ತರಿಗೆ ತೊಂದರೆಯಾಗದಂತೆ ಮುಕ್ತ ಸೇವೆಗಳನ್ನು ನೀಡಲು ಟಿಟಿಡಿ ಹಲವಾರು ಡಿಜಿಟಲ್ ಉಪಕ್ರಮಗಳನ್ನು ಜಾರಿಗೆ ತರುತ್ತಿದೆ. ಪ್ರತಿಯೊಂದು ಹಂತದಲ್ಲೂ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳವ ಭಾಗವಾಗಿ ಈ ಹೊಸ ಕಿಯೋಸ್ಕ್ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಅದು ಹೇಳಿದೆ.

ADVERTISEMENT

ಈ ಹೊಸ ಸೇವೆಯು ಪ್ರಾಯೋಗಿಕವಾಗಿದ್ದು, ಪರಿಶೀಲನೆಯ ನಂತರ ಹಂತ ಹಂತವಾಗಿ ಹೆಚ್ಚಿನ ಕಿಯೋಸ್ಕ್‌ಗಳನ್ನು ಸ್ಥಾಪಿಸಲಾಗುವುದು. ಹಿರಿಯ ನಾಗರಿಕರು ಮತ್ತು ಮೊದಲ ಬಾರಿಗೆ ಭೇಟಿ ನೀಡುವವರಿಗೆ ಸಹಾಯ ಮಾಡಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬರುವ ತಿಂಗಳುಗಳಲ್ಲಿ ವಸತಿ ಮತ್ತು ಪ್ರಸಾದ ಕೌಂಟರ್‌ಗಳು ಸೇರಿದಂತೆ ಇತರ ಸೇವಾ ಕೇಂದ್ರಗಳಿಗೂ ಡಿಜಿಟಲ್ ಸೇವಾ ಸೌಲಭ್ಯಗಳನ್ನು ವಿಸ್ತರಿಸುವ ಬಗ್ಗೆಯೂ ಟಿಟಿಡಿ ಯೋಚಿಸುತ್ತಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.