
ಚಂಡೀಗಢ: ‘ಮುಖ್ಯಮಂತ್ರಿ ಕುರ್ಚಿಗೆ ₹500 ಕೋಟಿ ನೀಡಬೇಕು’ ಎಂಬ ತಮ್ಮ ಹೇಳಿಕೆಯು ರಾಜಕೀಯ ವಲಯದಲ್ಲಿ ಗದ್ದಲ ಎಬ್ಬಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ನವಜೋತ್ ಕೌರ್ ಸಿಧು ಅವರು ಸ್ಪಷ್ಟನೆ ನೀಡಿದ್ದಾರೆ.
‘ಕಾಂಗ್ರೆಸ್ ಪಕ್ಷವು ನಮ್ಮಿಂದ ಏನನ್ನೂ ಕೇಳಿಲ್ಲ ಎಂಬ ನನ್ನ ಹೇಳಿಕೆಯನ್ನು ತಿರುಚಿರುವುದನ್ನು ನೋಡಿ ಆಘಾತ ಉಂಟಾಗಿದೆ’ ಎಂದು ಅವರು ಭಾನುವಾರ ಸಂಜೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಪತಿ ನವಜೋತ್ ಸಿಂಗ್ ಸಿಧು ಅವರು ಬೇರೆ ಯಾವುದಾದರೂ ಪಕ್ಷದಿಂದ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯಾಗುವರೇ ಎಂಬ ಪ್ರಶ್ನೆಗೆ, ಮುಖ್ಯಮಂತ್ರಿ ಹುದ್ದೆಗೆ ನೀಡಲು ನಮ್ಮ ಬಳಿ ಹಣವಿಲ್ಲ ಎಂದಿದ್ದೆ. ನನ್ನ ನೇರ ಹೇಳಿಕೆಯನ್ನು ತಿರುಚಲಾಗಿದೆ’ ಎಂದಿದ್ದಾರೆ.
‘₹500 ಕೋಟಿ ಇರುವ ಸೂಟ್‌ಕೇಸ್ ಕೊಟ್ಟವರು ಮುಖ್ಯಮಂತ್ರಿ ಆಗುವರು’ ಎಂದು ಕೌರ್ ಅವರು ಶನಿವಾರ ಹೇಳುವ ಮೂಲಕ ವಿವಾದ ಉಂಟುಮಾಡಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಕೌರ್, ಕಾಂಗ್ರೆಸ್ ಪಕ್ಷವು ತನ್ನ ಪತಿಯನ್ನು ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಎಂದು ಘೋಷಿಸಿದರೆ ಸಕ್ರಿಯ ರಾಜಕಾರಣಕ್ಕೆ ಮರಳುತ್ತಾರೆ ಎಂದು ಹೇಳಿದ್ದರು.
‘ಯಾವುದೇ ಪಕ್ಷಕ್ಕೆ ನೀಡಲು ನಮ್ಮ ಬಳಿ ಹಣವಿಲ್ಲ. ನಾವು ಯಾವಾಗಲೂ ಪಂಜಾಬ್ ಪರವಾಗಿ ಮಾತನಾಡುತ್ತೇವೆ. ಆದರೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ನೀಡಬೇಕಾದ ₹500 ಕೋಟಿ ನಮ್ಮಲ್ಲಿಲ್ಲ’ ಎಂದಿದ್ದರು.
ಯಾರಾದರೂ ನಿಮ್ಮಲ್ಲಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆಯೇ ಎಂಬ ಪ್ರಶ್ನೆಗೆ, ‘ಯಾರೂ ಬೇಡಿಕೆ ಇಟ್ಟಿಲ್ಲ. ಆದರೆ ₹500 ಕೋಟಿ ಇರುವ ಸೂಟ್‌ಕೇಸ್ ನೀಡುವವರು ಮುಖ್ಯಮಂತ್ರಿ ಆಗುತ್ತಾರೆ’ ಎಂದು ಪ್ರತಿಕ್ರಿಯಿಸಿದ್ದರು.
ಕೌರ್ ಹೇಳಿಕೆಯು ಕಾಂಗ್ರೆಸ್ ಪಕ್ಷ ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ ಎಂಬ ‘ಕೊಳಕು ಸತ್ಯ’ವನ್ನು ಹಾಗೂ ಅದು ಪಾಲಿಸಿಕೊಂಡು ಬಂದಿರುವ ‘ಹಣದ ಚೀಲದ ರಾಜಕೀಯ’ವನ್ನು ಬಹಿರಂಗಪಡಿಸಿದೆ ಎಂದು ಬಿಜೆಪಿ ಮತ್ತು ಎಎಪಿ ಟೀಕಿಸಿದ್ದವು.
ಸಿ.ಎಂ ಕುರ್ಚಿಗೆ ಬೆಲೆ ಎಷ್ಟು ನಿಗದಿ: ಅಶೋಕ
ಬೆಳಗಾವಿ: ‘ಪಂಜಾಬ್‌ನಂತಹ ಸಣ್ಣ ರಾಜ್ಯದಲ್ಲೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಗೆ ಕಾಂಗ್ರೆಸ್ ಹೈಕಮಾಂಡ್ ₹500 ಕೋಟಿ ಬೆಲೆ ನಿಗದಿ ಮಾಡಿದ್ದರೆ, ಕರ್ನಾಟಕದಂತಹ ಸಂಪದ್ಭರಿತ ರಾಜ್ಯದಲ್ಲಿ ಎಷ್ಟು ನಿಗದಿ ಮಾಡಿರಬಹುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ. ಪಂಜಾಬ್‌ನ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರ ಪತ್ನಿಯ ಹೇಳಿಕೆಯನ್ನು ಉಲ್ಲೇಖಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅಶೋಕ, ‘ನಾಯಕತ್ವ ಬದಲಾವಣೆ ವಿಷಯ ದೆಹಲಿಯಲ್ಲಿ ನಮ್ಮ ಐದಾರು ಜನರ ನಡುವಿನ ‘ಗುಟ್ಟಿನ ವ್ಯಾಪಾರ’ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದು, ಬಹುಶಃ ಇದೇ ಕಾರಣಕ್ಕಿರಬಹುದು’ ಎಂದಿದ್ದಾರೆ.
ಅಮಾನತು
ಚಂಡೀಗಢ: ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಹ ಹೇಳಿಕೆ ನೀಡಿದ್ದಕ್ಕೆ ನವಜೋತ್ ಕೌರ್ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಸೋಮವಾರ ಅಮಾನತು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.