ಪುಣೆ: ಡೆಲಿವರಿ ಏಜೆಂಟ್ ಸೋಗಿನಲ್ಲಿ ಫ್ಲಾಟ್‌ಗೆ ನುಗ್ಗಿದ್ದ ಅಪರಿಚಿತ ವ್ಯಕ್ತಿಯು, ತನ್ನ ಮೇಲೆ ರಾಸಾಯನಿಕ ಸ್ಪ್ರೇ ಮಾಡಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿ ಪುಣೆಯ 22 ವರ್ಷದ ಯುವತಿ ದೂರು ನೀಡಿದ್ದ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿದೆ. ಯುವತಿಯ ಆರೋಪವು ಸುಳ್ಳು ಹಾಗೂ ಹಾದಿ ತಪ್ಪಿಸುವಂತಹದ್ದು ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಪುಣೆಯ ಕೊಂಡ್ವಾ ಪ್ರದೇಶದಲ್ಲಿ ನೆಲೆಸಿರುವ ಹಾಗೂ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಯುವತಿ, ಅಪರಿಚಿತ ವ್ಯಕ್ತಿಯು ಕೃತ್ಯವೆಸಗಿದ ಬಳಿಕ ತನ್ನದೇ (ಯುವತಿಯ) ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿ, ಕೃತ್ಯದ ಬಗ್ಗೆ ಬಾಯಿಬಿಟ್ಟರೆ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವುದಾಗಿ ಬೆದರಿಕೆಯೊಡ್ಡಿದ್ದ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದರು.
ಇದೀಗ, ಈ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿದೆ. ಡೆಲಿವರಿ ಏಜೆಂಟ್ ಎಂದು ಯುವತಿ ಆರೋಪಿಸಿರುವ ವ್ಯಕ್ತಿಯು ಅಸಲಿಗೆ ಆಕೆಯ ಸ್ನೇಹಿತ. ಆತ, ಆಕೆಯ ಸಮ್ಮತಿಯಂತೆ ಫ್ಲಾಟ್‌ಗೆ ಬಂದಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.
'ಘಟನಾವಳಿ, ಸಿಸಿಟಿವಿ ದೃಶ್ಯಗಳು, ಮೊಬೈಲ್ ಸಂದೇಶಗಳು, ಕರೆ ವಿವರ ಸೇರಿದಂತೆ ಸಾಕ್ಷ್ಯಗಳು ಹಾಗೂ ಮಹಿಳೆಯ ವರ್ತನೆಯು ಇದು ಅತ್ಯಾಚಾರವಲ್ಲ ಎಂಬುದನ್ನು ಸೂಚಿಸುತ್ತಿವೆ. ಯುವತಿ ನೀಡಿರುವ ದೂರು ಸಂಪೂರ್ಣ ಸುಳ್ಳು ಮತ್ತು ದಾರಿ ತಪ್ಪಿಸುವಂತಿದೆ' ಎಂದು ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.
ಯುವತಿಯು ಈ ರೀತಿ ಮಾಡಿದ್ದೇಕೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿರುವ ಅವರು, ಆಕೆಯ ವಿರುದ್ಧ ಇನ್ನಷ್ಟೇ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.
ದೂರು ದಾಖಲಾದ 24 ಗಂಟೆಗಳಲ್ಲೇ ಇದೊಂದು ಸುಳ್ಳು ಪ್ರಕರಣ ಎಂಬುದನ್ನು ಪೊಲೀಸರು ಬಯಲು ಮಾಡಿದ್ದಾರೆ. ಈ ಪ್ರಕರಣದ ಬೆನ್ನಲ್ಲೇ ಪುಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ, ಮಹಿಳೆಯ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿದ್ದವು ಎಂದಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಬದ್ಧವಾಗಿದ್ದಾರೆ. ಜನರು ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಯುವತಿಯು ಮಾನಸಿಕ ಸ್ಥಿರತೆ ಕಳೆದುಕೊಂಡಿರುವುದಾಗಿಯೂ ತನಿಖಾಧಿಕಾರಿಗಳಿಗೆ ಹೇಳಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.