ADVERTISEMENT

ರಾಷ್ಟ್ರವಿರೋಧಿ ಟ್ವೀಟ್ ವಿರುದ್ಧ ದೂರು ನೀಡಿದ್ದಕ್ಕೆ ನನ್ನ ಖಾತೆ ಬ್ಲಾಕ್‌: ಹೆಗಡೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 17:35 IST
Last Updated 26 ಏಪ್ರಿಲ್ 2020, 17:35 IST
   
""
""

ಬೆಂಗಳೂರು: ರಾಷ್ಟ್ರವಿರೋಧಿ ಟ್ವೀಟ್ ವಿರುದ್ಧ ದೂರು ಕೊಟ್ಟಿದ್ದಕ್ಕೆ ನನ್ನ ಟ್ವಿಟರ್ ಖಾತೆ ಬ್ಲಾಕ್ ಮಾಡಲಾಗಿದೆ ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಹೇಳಿದ್ದಾರೆ.

ಈ ಬಗ್ಗೆ ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, 'ಟ್ವಿಟರ್‌ನ ಭಾರತ ವಿರೋಧಿ ನೀತಿ ಮತ್ತೊಮ್ಮೆ ಬಯಲಾಗಿದೆ. ಭಾರತದ ವಿರುದ್ಧ ಷಡ್ಯಂತರ ಹಾಗೂ ಭಾರತವನ್ನು ಒಡೆಯುವ ಟ್ವೀಟ್‌ಗಳನ್ನು ಪ್ರಚಾರ ಮಾಡುವ ಉದ್ಯಮವನ್ನು ಟ್ವಿಟ್ಟರ್ ಮಾಡುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಮಾಡಿರುವ ಟ್ವೀಟ್‌ ಅನ್ನು ತೆಗೆದುಹಾಕಿದಲ್ಲಿ ನನ್ನ ಅಕೌಂಟ್ ಅನ್ನು ಪುನಃ ಸಕ್ರಿಯಗೊಳಿಸುವುದಾಗಿ ಟ್ವಿಟರ್‌ ಹೇಳಿದೆ ಎಂದಿರುವ ಅವರು, 'ಕೆಲವು ದಿನಗಳ ಹಿಂದೆ ಗುರುಪಟವಂತ ಸಿಂಘ್ ಪನ್ನೂನ್ ಎಂಬ ಟ್ವಿಟರ್ ಖಾತೆಯಿಂದ ಪಂಜಾಬ್ ರಾಜ್ಯವನ್ನು ಭಾರತದಿಂದ ಸ್ವಾತಂತ್ರಗೊಳಿಸಿ ಖಲಿಸ್ಥಾನ ಎಂಬ ಪ್ರತ್ಯೇಕ ರಾಷ್ಟ್ರವನ್ನಾಗಿಸುವುದರ ಬಗ್ಗೆ ಟ್ವೀಟ್ ಮಾಡಿದ್ದು ಅದನ್ನು ಟ್ವಿಟರ್‌ಗೆ ಹಣಪಾವತಿಸಿ ಜಾಹಿರಾತು ನೀಡಿದ್ದಾರೆ. ಇದು ಭಾರತದ ವಿರುದ್ಧ ನಡೆಸುತ್ತಿರುವ ಜಾಹೀರಾತಾಗಿದ್ದು ಇದನ್ನು ಟ್ವಿಟರ್‌ ಅನುಮೋದಿಸಿ ಜಾಹೀರಾತನ್ನು ಪ್ರಚುರ ಪಡೆಸಿದೆ. ಇಂತಹ ರಾಷ್ಟ್ರವಿರೋಧ ಚಟುವಟಿಕೆಯನ್ನು ಬಯಲು ಮಾಡಿ, ಸನ್ಮಾನ್ಯ ಪ್ರಧಾನಿ ಹಾಗೂ ಗೃಹ ಸಚಿವರ ಗಮನಕ್ಕೆ ನಾನು ತಂದಿದ್ದರ ಪರಿಣಾಮವಾಗಿ, ಏಪ್ರಿಲ್ 22 ರಂದು ತಬ್ಲೀಘಿ ಜಮಾತ್ ನ ವಿರುದ್ಧ ನಾನು ಮಾಡಿರುವ ಟ್ವೀಟಿನ ನೆಪವಿಟ್ಟುಕೊಂಡು ನನ್ನ ಟ್ವಿಟ್ಟರ್ ಅಕೌಂಟನ್ನು ರದ್ದುಮಾಡಿದ್ದಾರೆ. ಬದಲಾಗಿ, ನಾನು ಮಾಡಿರುವ ಟ್ವೀಟನ್ನು ತೆಗೆದುಹಾಕಿದಲ್ಲಿ ನನ್ನ ಅಕೌಂಟ್ ಅನ್ನು ಪುನಃ ಸಕ್ರಿಯಗೊಳಿಸುವುದಾಗಿ ಹೇಳಿದ್ದಾರೆ' ಎಂದು ಅನಂತಕುಮಾರ್‌ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

ದೇಶ ವಿರೋಧಿ ಸಮಾಜಿಕ ಜಾಲತಾಣದ ಅಕೌಂಟಿಗಿಂತ ನನ್ನ ದೇಶ, ನನ್ನ ಸಿದ್ಧಾಂತ ನನ್ನ ಜೀವನದ ಆದ್ಯತೆ ಎಂದಿರುವ ಅವರು, 'ದೇಶದ ವಿರುದ್ಧ ನಡೆಯುವ ಯಾವುದೇ ನಡೆಯನ್ನು ಅದು ಯಾರೇ ಇರಲಿ, ನನ್ನ ವಿರೋಧವನ್ನು ನಾನು ವ್ಯಕ್ತಪಡೆಸುತ್ತಾ ಬಂದಿದ್ದೇನೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ಈ ನಿಟ್ಟಿನಲ್ಲಿ ನಾನು ಮಾಡಿರುವ ಟ್ವೀಟ್‌ ಅನ್ನು ನಾನು ಅಳಿಸುವ ಪ್ರಶ್ನೆಯೇ ಇಲ್ಲ. ಅದರಲ್ಲಿ ಟ್ವಿಟರ್‌ ನಡೆಸುತ್ತಿರುವ ಭಾರತ ವಿರೋಧ ಪ್ರಚಾರಗಳನ್ನು ನಾನು ಅತ್ಯಂತ ತೀವ್ರವಾಗಿ ಖಂಡಿಸುತ್ತೇನೆ' ಎಂದಿದ್ದಾರೆ.

ಅನಂತಕುಮಾರ ಹೆಗಡೆ ಅವರಿಗೆ ಟ್ವಿಟರ್ ಕಳುಹಿಸಿರುವ ನೋಟಿಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.