ADVERTISEMENT

ಮಿಜೋರಾಂ: ಮಾಜಿ ಸಚಿವ ಬೆಚುವಾರನ್ನು ಉಚ್ಚಾಟಿಸಿದ ಎಂಎನ್‌ಎಫ್‌

ಪಿಟಿಐ
Published 26 ಜನವರಿ 2023, 11:23 IST
Last Updated 26 ಜನವರಿ 2023, 11:23 IST
   

ಅಯಿಜೋಲ್‌ (ಮಿಜೋರಾಂ): ಆಡಳಿತಾರೂಢ ಮಿಜೊ ನ್ಯಾಷನಲ್‌ ಫ್ರಂಟ್‌ (ಎಂಎನ್‌ಎಫ್‌) ಪಕ್ಷವು ತನ್ನ ಇಬ್ಬರು ಹಿರಿಯ ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಿದೆ. ‘ಶಿಸ್ತು ಉಲ್ಲಂಘನೆ’ ಹಾಗೂ ‘ಪಕ್ಷ ವಿರೋಧಿ ಚಟುವಟಿಕೆ’ಗಳಲ್ಲಿ ಇಬ್ಬರೂ ಮುಖಂಡರು ತೊಡಗಿದ್ದರು ಎಂದು ಪಕ್ಷವು ಆರೋಪಿಸಿದೆ.

‘ಮಾಜಿ ಸಚಿವ ಹಾಗೂ ಶಾಸಕ ಕೆ. ಬೆಚುವಾ ಹಾಗೂ ಮಾರಾ ಸ್ವಾಯತ್ತ ಜಿಲ್ಲಾ ಮಂಡಳಿ (ಎಂಎಡಿಸಿ) ಅಧ್ಯಕ್ಷ ಎನ್‌. ವೈಕು ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ’ ಎಂದು ಎಂಎನ್‌ಎಫ್‌ನ ಪ್ರಧಾನ ಕಾರ್ಯದರ್ಶಿ ಟಿ. ಲೈಸೈಮಾ ಅವರು ಬುಧವಾರ ಹೇಳಿದರು.

ಮುಖ್ಯಮಂತ್ರಿ ಹಾಗೂ ಎಂಎನ್‌ಎಫ್‌ ಪಕ್ಷದ ಅಧ್ಯಕ್ಷ ಜೋರಂಥಾಂಗ ಅವರು ಬೆಚುವಾ ಅವರಿಗೆ ಸಚಿವ ಸ್ಥಾನ ತೊರೆಯುವಂತೆ ಹೇಳಿದ್ದರು. ಇದೇ ಕಾರಣಕ್ಕೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬೆಚುವಾ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ADVERTISEMENT

‘ನನ್ನ ವಿರುದ್ಧ ಮಾಡಲಾದ ಆರೋಪಗಳಿಗೆ ಸ್ಪಷ್ಟನೆ ನೀಡುವುದಕ್ಕಾದರೂ ಪಕ್ಷ ನನಗೆ ಷೋಕಾಸ್‌ ನೋಟಿಸ್‌ ನೀಡಬೇಕಿತ್ತು’ ಎಂದು ಉಚ್ಚಾಟಿತ ಶಾಸಕ ಬೆಚುವಾ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬೇರೆ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕುರಿತು ಬೆಚುವಾ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.