ADVERTISEMENT

ಯುಎಇ ಅಧ್ಯಕ್ಷರ 3.5 ಗಂಟೆಗಳ ಭಾರತ ಪ್ರವಾಸ; ರಕ್ಷಣಾ ವಲಯ ಸೇರಿದಂತೆ ಬೃಹತ್ ಒಪ್ಪಂದ

ಪಿಟಿಐ
Published 20 ಜನವರಿ 2026, 2:30 IST
Last Updated 20 ಜನವರಿ 2026, 2:30 IST
<div class="paragraphs"><p>ಭಾರತ-ಯುಎಇ ಮಹತ್ವದ ಒಪ್ಪಂದ</p></div>

ಭಾರತ-ಯುಎಇ ಮಹತ್ವದ ಒಪ್ಪಂದ

   

ನವದೆಹಲಿ: ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸೋಮವಾರದಂದು ಭಾರತ ಪ್ರವಾಸ ಕೈಗೊಂಡಿದ್ದಾರೆ. ಕೇವಲ ಮೂರುವರೆ ಗಂಟೆಗಳ ಭಾರತದ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಕ್ಷಣಾ ವಲಯ ಸೇರಿದಂತೆ ಬೃಹತ್ ವ್ಯಾಪಾರ ಒಪ್ಪಂದದ ಕುರಿತು ಚರ್ಚಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ ಯುಎಇ ಅಧ್ಯಕ್ಷರನ್ನು 'ಸಹೋದರ' ಎಂದು ಸಂಬೋಧಿಸಿದ್ದಾರೆ.

ADVERTISEMENT

ಮಾತುಕತೆಯಲ್ಲಿ ಭಾರತ ಹಾಗೂ ಯುಎಇ ನಡುವಣ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಲು ವಿಸೃತವಾದ ಕಾರ್ಯಸೂಚಿಯನ್ನು ನಿಗದಿಪಡಿಸಲಾಗಿದೆ. ಭಾರತ ಮತ್ತು ಯುಎಇ 2032ರವರೆಗೆ ಪ್ರತಿ ವರ್ಷ ಸುಮಾರು ₹18.17 ಲಕ್ಷ ಕೋಟಿ (200 ಬಿಲಿಯನ್ ಅಮೆರಿಕನ್ ಡಾಲರ್) ವ್ಯಾಪಾರ ನಡೆಸುವ ಗುರಿ ಹೊಂದಿದೆ.

ಇದರಲ್ಲಿ ಕಾರ್ಯತಂತ್ರದ ಬೃಹತ್ ರಕ್ಷಣಾ ಯೋಜನೆಯ ಜೊತೆಗೆ ದ್ರವೀಕೃತ ನೈಸರ್ಗಿಕ ಅನಿಲ (ಎನ್‌ಎನ್‌ಜಿ) ಒಪ್ಪಂದಕ್ಕೆ ಸಹಿ ಹಾಕಲಾಯಿತು.

ದೆಹಲಿ ವಿಮಾನ ನಿಲ್ದಾಣದಲ್ಲಿ ಯುಎಇ ಅಧ್ಯಕ್ಷರನ್ನು ಪ್ರಧಾನಿ ನರೇಂದ್ರ ಮೋದಿ ಬರಮಾಡಿಕೊಂಡರು. ಅವರೊಂದಿಗೆ ತಾಯಿ ಶೇಖ್ ಫಾತಿಮಾ ಬಿಂತ್ ಮುಬಾರಕ್ ಅಲ್ ಕೆತ್ಬಿ ಅವರೂ ಆಗಮಿಸಿದ್ದರು. ಬಳಿಕ ಪ್ರಧಾನಿ ನಿವಾಸಕ್ಕೆ ಕರೆದೊಯ್ದು ಸತ್ಕರಿಸಿದರು. ಫಾತಿಮಾ ಅವರಿಗೆ ಕಾಶ್ಮೀರದ ಪಶ್ಮೀನಾ ಸಾಲನ್ನು ಮತ್ತು ಕಾಶ್ಮೀರ ಕಣಿವೆಯಲ್ಲಿ ಬೆಳೆದ ಕೇಸರಿಯನ್ನು ತೆಲಂಗಾಣದಲ್ಲಿ ತಯಾರಿಸಿದ ಬೆಳ್ಳಿ ಬಾಕ್ಸ್‌ಗಳಲ್ಲಿ ಇರಿಸಿ ಪ್ರಧಾನಿ ಮೋದಿ ಉಡುಗೊರೆ ನೀಡಿದರು.

ಪಾಕಿಸ್ತಾನ-ಸೌದಿ ಅರೇಬಿಯಾ ರಕ್ಷಣಾ ಒಪ್ಪಂದದ ನಾಲ್ಕು ತಿಂಗಳ ಬಳಿಕ ಭಾರತ-ಯುಎಇ ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆಗೆ ಸಹಿ ಹಾಕಿರುವುದು ಗಮನಾರ್ಹವೆನಿಸಿದೆ.

ರಕ್ಷಣಾ ಪಾಲುದಾರಿಕೆಯಡಿಯಲ್ಲಿ ಉಭಯ ರಾಷ್ಟ್ರಗಳು ರಕ್ಷಣಾ ಕೈಗಾರಿಕಾ ಸಹಯೋಗ, ಸುಧಾರಿತ ತಂತ್ರಜ್ಞಾನ, ಸೈಬರ್‌ಸ್ಪೇಸ್ ತರಬೇತಿ, ವಿಶೇಷ ಕಾರ್ಯಾಚರಣೆ, ಮಿಲಿಟರಿ ಹಾಗೂ ಭಯೋತ್ಪಾದನೆ ನಿಗ್ರಹದಲ್ಲಿ ಸಹಕಾರವನ್ನು ಎದುರು ನೋಡುತ್ತಿವೆ.

2028ರಿಂದ 10 ವರ್ಷಗಳ ಅವಧಿಯಲ್ಲಿ ಅಬುಧಾಬಿ ನ್ಯಾಷನಲ್ ಒಯಿಲ್ ಕಂಪನಿ ಗ್ಯಾಸ್‌‌ನಿಂದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) 0.5 ಮಿಲಿಯನ್ ಮೆಟ್ರಿಕ್ ಟನ್ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಖರೀದಿಸುವ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಭಾರತಕ್ಕೆ ಕತಾರ್ ಬಳಿಕ ಯುಎಇ ಎನ್‌ಎನ್‌ಜಿ ಪೂರೈಸುವ ಎರಡನೇ ಅತಿದೊಡ್ಡ ರಾಷ್ಟ್ರವಾಗಿದೆ.

ಶೇಖ್‌ ಮೊಹಮ್ಮದ್‌ ಬಿನ್‌ ಜಾಯೆದ್‌ ಅಲ್‌ ನಹ್ಯಾನ್, ನರೇಂದ್ರ ಮೋದಿ

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಅಮೆರಿಕದ ಸುಂಕ ನೀತಿಯಿಂದ ಎದುರಾಗಿರುವ ವ್ಯಾಪಾರ ಬಿಕ್ಕಟ್ಟಿನ ನಡುವೆ ಈ ಭೇಟಿ ನಡೆದಿದೆ.

ಈ ಸಂದರ್ಭದಲ್ಲಿ ನಾಗರಿಕ ಪರಮಾಣು ವಲಯಲ್ಲಿ ಸುಧಾರಿತ ತಂತ್ರಜ್ಞಾನದ ಸಹಯೋಗದ ಕುರಿತು ಚರ್ಚಿಸಲಾಯಿತು. ಕೃತಕ ಬುದ್ಧಿಮತ್ತೆ (ಎ.ಐ) ಮತ್ತೊಂದು ಆದ್ಯತೆ ಕ್ಷೇತ್ರವೆಂದು ಪರಿಗಣಿಸಲಾಯಿತು. ಯುಎಇ ಸಹಕಾರದಲ್ಲಿ ಭಾರತದಲ್ಲಿ ಸೂಪರ್ ಕಂಪ್ಯೂಟಿಂಗ್ ಕ್ಲಸ್ಟರ್ ರಚಿಸುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ಭಾರತದಲ್ಲಿ ಡೇಟಾ ಕೇಂದ್ರಗಳ ಸಾಮರ್ಥ್ಯಗಳನ್ನು ವಿಸ್ತರಿಸಲು ಹೂಡಿಕೆಯನ್ನು ಎದುರು ನೋಡಲಾಗುತ್ತಿದೆ.

ಇಂಧನ, ಬಾಹ್ಯಾಕಾಶ ಮೂಲಸೌಕರ್ಯ ಅಭಿವೃದ್ಧಿ, ಆಹಾರ ಭದ್ರತೆಯಲ್ಲಿ ಸಹಕಾರ, ಕೃಷಿ ರಫ್ತು ಉತ್ತೇಜನ ಕುರಿತು ಚರ್ಚಿಸಲಾಯಿತು. 'ಇದೊಂದು ಕಿರು ಭೇಟಿ, ಆದರೆ ಅತ್ಯಂತ ಮಹತ್ವದ ಭೇಟಿ' ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಬಣ್ಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.