‘ಉದಯಪುರ ಫೈಲ್ಸ್’ ಸಿನಿಮಾ ಪೋಸ್ಟರ್
ಉದಯಪುರ: ‘ಉದಯಪುರ ಫೈಲ್ಸ್: ಕನ್ಹಯ್ಯ ಲಾಲ್ ಟೈಲರ್ ಮರ್ಡರ್’ ಚಿತ್ರದ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ ನೀಡಿದ ಬೆನ್ನಲ್ಲೇ ಕನ್ಹಯ್ಯ ಲಾಲ್ ಅವರ ಪತ್ನಿ ಜಶೋದಾ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ‘ಉದಯಪುರ ಫೈಲ್ಸ್’ ಚಿತ್ರವು ದೇಶದಾದ್ಯಂತ ಬಿಡುಗಡೆಯಾಗುವಂತೆ ನೋಡಿಕೊಳ್ಳಬೇಕು ಮತ್ತು ಸತ್ಯ ಇಡೀ ಜಗತ್ತಿಗೆ ತಿಳಿಯಬೇಕು ಎಂದು ಮನವಿ ಮಾಡಿದ್ದಾರೆ.
‘ನಾನೇ ಖುದ್ದಾಗಿ ‘ಉದಯಪುರ ಫೈಲ್ಸ್’ ಚಿತ್ರವನ್ನು ವೀಕ್ಷಿಸಿದ್ದೇನೆ. ಇದು ನನ್ನ ಪತಿ ಕನ್ಹಯ್ಯ ಲಾಲ್ ಕೊಲೆ ಪ್ರಕರಣವನ್ನು ಮಾತ್ರ ಕೇಂದ್ರೀಕರಿಸಿದ್ದು, ಇದರಲ್ಲಿ ಯಾವುದೇ ತಪ್ಪು ಕಂಡುಬಂದಿಲ್ಲ’ ಎಂದು ಜಶೋದಾ ಹೇಳಿದ್ದಾರೆ.
‘ಮೂರು ವರ್ಷಗಳ ಹಿಂದೆ ನನ್ನ ಪತಿಯನ್ನು ಹತ್ಯೆ ಮಾಡಲಾಯಿತು. ಆದರೆ, ವಕೀಲರು ನೈಜ ಘಟನೆಯನ್ನು ಚಿತ್ರದ ಮೂಲಕ ತೋರಿಸಬಾರದು ಎಂದು ಹೇಳುತ್ತಿದ್ದಾರೆ. ಇದು ಎಷ್ಟು ಸರಿ’ ಎಂದು ಜಶೋದಾ ಪ್ರಶ್ನಿಸಿದ್ದಾರೆ.
‘ಉದಯಪುರ ಫೈಲ್ಸ್’ ಚಿತ್ರ ಬಿಡುಗಡೆ ವಿಚಾರವಾಗಿ ಚರ್ಚೆ ನಡೆಸಲು ನಾನು ಮತ್ತು ನನ್ನ ಇಬ್ಬರು ಮಕ್ಕಳು ಪ್ರಧಾನಿ ಮೋದಿ ಭೇಟಿಗೆ ಸಮಯಾವಕಾಶ ಕೋರಿದ್ದೇವೆ ಎಂದು ಜಶೋದಾ ವಿವರಿಸಿದ್ದಾರೆ.
‘ನನ್ನ ತಂದೆಯ ಹಂತಕರಿಗೆ ಇನ್ನೂ ಶಿಕ್ಷೆಯಾಗಿಲ್ಲ. ಪ್ರಕರಣ ಮೂರು ವರ್ಷಗಳಿಂದ ಬಾಕಿ ಇದೆ. ನಮಗೆ ನ್ಯಾಯ ಯಾವಾಗ ಸಿಗುತ್ತದೆ’ ಎಂದು ಕನ್ಹಯ್ಯ ಲಾಲ್ ಅವರ ಮಗ ಯಶ್ ತೇಲಿ ಪ್ರಶ್ನಿಸಿದ್ದಾರೆ.
‘ಉದಯಪುರ ಫೈಲ್ಸ್’ ಚಿತ್ರ ಬಿಡುಗಡೆಗೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಜಮೀಯತ್ ಉಲೆಮಾ ಎ ಹಿಂದ್ ಸಂಘಟನೆ ಮತ್ತು ಪತ್ರಕರ್ತ ಪ್ರಶಾಂತ್ ಟಂಡನ್ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಆಲಿಸಿದ್ದ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ಅನೀಶ್ ದಯಾಳ್ ನೇತೃತ್ವದ ನ್ಯಾಯಪೀಠವು ಈಚೆಗೆ ಮಧ್ಯಂತರ ಆದೇಶವನ್ನು ಪ್ರಕಟಿಸಿತ್ತು.
ಚಿತ್ರ ಬಿಡುಗಡೆ ಕುರಿತು ಕೇಂದ್ರ ಸರ್ಕಾರ ನಿರ್ಧರಿಸುವವರೆಗೆ ತಡೆಯಾಜ್ಞೆ ಜಾರಿಯಲ್ಲಿರುತ್ತದೆ ಎಂದು ನ್ಯಾಯಪೀಠ ತಿಳಿಸಿತ್ತು.
‘ಕೋಮುದ್ವೇಷ ಪ್ರಚೋದಿಸಿ, ಮುಸ್ಲಿಮರನ್ನು ಅವಮಾನಕರ ರೀತಿಯಲ್ಲಿ ಚಿತ್ರಿಸಿರುವ ‘ಉದಯಪುರ ಫೈಲ್ಸ್’ ಸಿನಿಮಾವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಸಿಬಿಎಫ್‌ಸಿಗೆ ನಿರ್ದೇಶನ ನೀಡಬೇಕು. ಒಂದು ವೇಳೆ ಸಿನಿಮಾ ಬಿಡುಗಡೆಯಾದರೆ ಕೋಮು ಸಾಮರಸ್ಯ ಕದಡಬಹುದು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಗಂಭೀರ ಅಪಾಯವನ್ನುಂಟುಮಾಡಬಹುದು’ ಎಂದು ಅರ್ಜಿದಾರರು ವಾದಿಸಿದ್ದರು.
ಕನ್ಹಯ್ಯ ಲಾಲ್ ಅವರನ್ನು 2022ರ ಜೂನ್ 28ರಂದು ಅವರ ಅಂಗಡಿಯಲ್ಲಿ ಆರೋಪಿಗಳಾದ ರಿಯಾಜ್ ಅನ್ಸಾರಿ ಮತ್ತು ಗೌಸ್ ಮಹಮ್ಮದ್ ಶಿರಚ್ಛೇದ ಮಾಡಿದ್ದರು. ಪ್ರಕರಣ ಸಂಬಂಧ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.