ADVERTISEMENT

ಉದಯಪುರ ಹತ್ಯೆ ಆರೋಪಿಗಳು 10 ದಿನ ಪೊಲೀಸ್‌ ವಶಕ್ಕೆ: ಕೋರ್ಟ್ ಹೊರಗೆ ಜನರಿಂದ ಹಲ್ಲೆ

ಪಿಟಿಐ
Published 2 ಜುಲೈ 2022, 12:58 IST
Last Updated 2 ಜುಲೈ 2022, 12:58 IST
ಆರೋಪಿಗಳನ್ನು ಜನ ಸಮೂಹ ಎಳೆದಾಡುತ್ತಿರುವುದು
ಆರೋಪಿಗಳನ್ನು ಜನ ಸಮೂಹ ಎಳೆದಾಡುತ್ತಿರುವುದು    

ಜೈಪುರ: ಉದಯಪುರದ ಟೇಲರ್ ಕನ್ಹಯ್ಯಾ ಲಾಲ್ ಹತ್ಯೆಯ ಆರೋಪಿಗಳ ಮೇಲೆ ಶನಿವಾರ ಜೈಪುರ ನ್ಯಾಯಾಲಯದ ಹೊರಗೆ ಜನರು ಹಲ್ಲೆ ನಡೆಸಿದ್ದಾರೆ.

ಕೊಲೆ ಆರೋಪಿಗಳಾದ ರಿಯಾಜ್ ಅಖ್ತಾರಿ, ಘೌಸ್ ಮೊಹಮ್ಮದ್, ಮೌಸಿನ್‌ ಮತ್ತು ಆಸೀಫ್‌ ಎಂಬುವವರನ್ನು ಎನ್‌ಐಎ ನ್ಯಾಯಾಲಯವು 10 ದಿನಗಳ (ಜುಲೈ 12ರ ವರೆಗೆ) ಪೊಲೀಸ್‌ ವಶಕ್ಕೆ ನೀಡಿ ಆದೇಶಿಸಿತು.

ಆರೋಪಿಗಳನ್ನು ಪೊಲೀಸರು ಕರೆದೊಯ್ಯುತ್ತಿದ್ದ ವೇಳೆ ನ್ಯಾಯಾಲಯದ ಹೊರಗೆ ಜಮಾಯಿಸಿದ್ದ ಸಮೂಹವು ಹಲ್ಲೆ ನಡೆಸಿತು. ಪೊಲೀಸರು ಕೂಡಲೇ ನಾಲ್ವರನ್ನೂ ವಾಹನಕ್ಕೆ ಹತ್ತಿಸಿಕೊಂಡು ಹೊರಟರು.

ADVERTISEMENT

ಪ್ರವಾದಿ ಮಹಮ್ಮದರನ್ನು ಅವಹೇಳನ ಮಾಡಿದ ಕಾರಣಕ್ಕೆ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್‌ ಹಾಕಿದ ಕಾರಣಕ್ಕೆ ಟೇಲರ್‌ ಕನ್ಹಯ್ಯಾ ಲಾಲ್‌ ಅವರನ್ನು ಅವರ ಅಂಗಡಿಯ ಬಳಿ ಕತ್ತು ಸೀಳಿ ಕೊಲೆ ಮಾಡಿದ್ದ ಆರೋಪಿಗಳು, ಘಟನೆಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಘಟನೆ ನಡೆದ ಕೆಲವು ಗಂಟೆಗಳಲ್ಲಿ ರಿಯಾಜ್ ಅಖ್ತಾರಿ ಮತ್ತು ಘೌಸ್ ಮೊಹಮ್ಮದ್ ಎಂಬುವವರನ್ನು ಬಂಧಿಸಲಾಗಿತ್ತು. ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ಮೊಹ್ಸಿನ್ ಮತ್ತು ಆಸಿಫ್ ಎಂಬ ಇತರ ಇಬ್ಬರು ಆರೋಪಿಗಳನ್ನು ಎರಡು ದಿನಗಳ ನಂತರ ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.