ಭದ್ರತಾ ಸಿಬ್ಬಂದಿ ನಿಂತಿರುವುದು
ಪಿಟಿಐ ಚಿತ್ರ
ರಜೌರಿ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗ್ರಾಮವೊಂದರಲ್ಲಿ 17 ಜನ ನಿಗೂಢವಾಗಿ ಮೃತಪಟ್ಟ ಪ್ರಕರಣದ ಬಳಿಕ ಗ್ರಾಮವನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಅಲ್ಲದೆ ಇದೇ ಊರಿನ ಇನ್ನೊಬ್ಬರು ವ್ಯಕ್ತಿ ತೀವ್ರ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಂಟೈನ್‌ಮೆಂಟ್ ವಲಯವಾಗಿ ಘೋಷಿಸಿದ ಕಾರಣ ಗ್ರಾಮದಲ್ಲಿ ಒಂದೆಡೆ ಹೆಚ್ಚು ಜನ ಸೇರುವಂತಿಲ್ಲ. ಜಿಲ್ಲಾಡಳಿತ ಒದಗಿಸಿದ ಆಹಾರವನ್ನಷ್ಟೇ ಸೇವಿಸಬೇಕು ಎಂದು ಆದೇಶಿಸಲಾಗಿದೆ.
ಗ್ರಾಮವನ್ನು ಮೂರು ಕಂಟೈನ್‌ಮೆಂಟ್ ವಲಯಗಳಾಗಿ ವಿಂಗಡಿಸಲಾಗಿದೆ. ಮೊದಲ ವಲಯದಲ್ಲಿ ಸಾವು ಸಂಭವಿಸಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜೀವ್ ಕುಮಾರ್ ಖಜುರಿಯಾ ಹೇಳಿದ್ದಾರೆ.
ಮೃತರ ಕುಟುಂಬಗಳ ಮನೆಗಳನ್ನು ಸೀಲ್ ಮಾಡಲಾಗುವುದು. ಗೊತ್ತುಪಡಿಸಿದ ಅಧಿಕಾರಿಗಳು ಅಥವಾ ಅಧಿಕಾರಿಗಳಿಂದ ಒಪ್ಪಿಗೆ ಪಡೆಯದ ಹೊರತು ಅವರ ಕುಟುಂಬ ಸದಸ್ಯರು ಸೇರಿದಂತೆ ಯಾರೂ ಕೂಡ ಅಲ್ಲಿಗೆ ತೆರಳಕೂಡದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಎರಡನೆ ವಲಯದಲ್ಲಿ ಮೃತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕದಲ್ಲಿ ಇರುವ ಕಾರಣ ಹಲವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಡಿ.7 ರಿಂದ ಜ.19ರವರೆಗಿನ ಅವಧಿಯಲ್ಲಿ ಒಂದೇ ಗ್ರಾಮದ ಮೂರು ಕುಟುಂಬದ 17 ಜನ ಅಸಹಜವಾಗಿ ಮೃತಪಟ್ಟಿದ್ದರು. ಹೀಗಾಗಿ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.