ADVERTISEMENT

ರೈತರ ಪ್ರತಿಭಟನೆಗೆ 7 ತಿಂಗಳು ಪೂರ್ಣ: ಹೋರಾಟ ಕೈಬಿಡುವಂತೆ ಕೃಷಿ ಸಚಿವ ತೋಮರ್ ಮನವಿ

ಪಿಟಿಐ
Published 26 ಜೂನ್ 2021, 14:08 IST
Last Updated 26 ಜೂನ್ 2021, 14:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಏಳುತಿಂಗಳು ಪೂರ್ಣಗೊಂಡಿದೆ. ಈ ವೇಳೆಹೋರಾಟವನ್ನು ಕೈಬಿಡುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಶನಿವಾರ ಮನವಿ ಮಾಡಿದ್ದಾರೆ. ಮಾತ್ರವಲ್ಲದೆರೈತರೊಂದಿಗೆ ಮಾತುಕತೆ ನಡೆಸಲು ಸರ್ಕಾರವು ಸಿದ್ಧವಿದೆ ಎಂದೂ ಹೇಳಿದ್ದಾರೆ.

ಸರ್ಕಾರ ಮತ್ತು ರೈತ ಸಂಘಟನೆಗಳು ಇದುವರೆಗೆ ಹನ್ನೊಂದು ಸುತ್ತಿನ ಮಾತುಕತೆ ನಡೆಸಿವೆ. ವಿವಾದವನ್ನು ಕೊನೆಗಾಣಿಸಲು ಜನವರಿ22ರಂದು ಕೊನೆಯ ಬಾರಿಗೆ ಮಾತುಕತೆ ನಡೆದಿತ್ತು. ಜನವರಿ26ರಂದು (ಗಣರಾಜ್ಯೋತ್ಸವ ದಿನದಂದು) ರೈತರು ಹಮ್ಮಿಕೊಂಡಿದ್ದ ಬೃಹತ್‌ ಟ್ರ್ಯಾಕ್ಟರ್‌ ರ್ಯಾಲಿ ವೇಳೆ ಗಲಭೆ ನಡೆದಿತ್ತು. ಅದಾದ ಬಳಿಕ ಮತ್ತೆ ಮಾತುಕತೆ ನಡೆದಿಲ್ಲ.

ಕೇಂದ್ರ ಸರ್ಕಾರ ರೂಪಿಸಿರುವ ಮೂರು ಹೊಸ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿಸಾವಿರಾರು ರೈತರು, ಅದರಲ್ಲೂ ಪಂಜಾಬ್‌, ಹರಿಯಾಣ ಮತ್ತು ಪಶ್ಚಿಮ ಉತ್ತರಪ್ರದೇಶದ ರೈತರು ದೆಹಲಿಯ ಗಡಿಗಳಲ್ಲಿ ಕಳೆದ ಏಳು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ADVERTISEMENT

ಸುಪ್ರೀಂ ಕೋರ್ಟ್‌, ಮುಂದಿನ ಆದೇಶದವರೆಗೆ ಕಾಯ್ದೆಗಳನ್ನು ಅನುಷ್ಠಾನಗೊಳಿಸದಂತೆ ತಡೆ ನೀಡಿದೆ. ಮಾತ್ರವಲ್ಲದೆ, ಪರಿಹಾರ ಕಂಡುಕೊಳ್ಳುವುದಕ್ಕಾಗಿ ಸಮಿತಿಯನ್ನೂ ರಚಿಸಿದೆ. ಸಮಿತಿಯು ಈಗಾಗಲೇ ವರದಿ ಒಪ್ಪಿಸಿದೆ.

ಸದ್ಯ ಪ್ರತಿಭಟನಾನಿರತ ರೈತರನ್ನುದ್ದೇಶಿಸಿ ಟ್ವೀಟ್‌ ಮಾಡಿರುವ ತೋಮರ್‌, ʼರೈತರು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ನಿಮ್ಮ (ಮಾಧ್ಯಮದವರ) ಮೂಲಕ ಮನವರಿಕೆ ಮಾಡಲು ಬಯಸುತ್ತೇನೆ. ದೇಶದಾದ್ಯಂತ ಸಾಕಷ್ಟು ಜನರು ಕೃಷಿ ಕಾಯ್ದೆಗಳ ಪರವಾಗಿ ಇದ್ದಾರೆ. ಕೆಲವು ರೈತರಿಗೆ ಕಾಯ್ದೆಗಳ ಬಗ್ಗೆ ಈಗಲೂ ಯಾವುದೇ ಸಮಸ್ಯೆ ಇದ್ದರೂ ಅವುಗಳನ್ನು ಆಲಿಸಲು ಮತ್ತು ಚರ್ಚಿಸಲು ಭಾರತ ಸರ್ಕಾರ ಸಿದ್ಧವಿದೆʼ ಎಂದು ತಿಳಿಸಿದ್ದಾರೆ.

ಸರ್ಕಾರವು ರೈತರೊಂದಿಗೆಇದುವರೆಗೆ11 ಸುತ್ತಿನ ಮಾತುಕತೆ ನಡೆಸಿದೆ. ಕನಿಷ್ಠ ಬೆಂಬಲ ಬೆಲೆಯನ್ನೂ (ಎಂಎಸ್‌ಪಿ) ಏರಿಸಿದೆ ಎಂದೂ ಹೇಳಿದ್ದಾರೆ.ರೈತರ ಪ್ರತಿಭಟನೆಯು ಕಳೆದ ವರ್ಷ ನವೆಂಬರ್‌26 ರಿಂದ ಆರಂಭವಾಗಿದೆ.ಕೋರೊನಾವೈರಸ್‌ ಸಾಂಕ್ರಾಮಿಕದ ನಡುವೆಯೂಏಳು ತಿಂಗಳನ್ನು ಪೂರ್ಣಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.