
ಕುಲದೀಪ್ ಸೆಂಗಾರ್
ಪಿಟಿಐ ಚಿತ್ರ
ನವದೆಹಲಿ: ಉನ್ನಾವೋ ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್ ಸೆಂಗಾರ್‌ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ, ಷರತ್ತುಬದ್ಧ ಜಾಮೀನು ನೀಡಿದ್ದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಇಂದು (ಸೋಮವಾರ) ತಡೆ ನೀಡಿದೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ಹಾಗೂ ವಕೀಲರಾದ ಅಂಜಲಿ ಪಟೇಲ್, ಪೂಜಾ ಶಿಲ್ಪಕರ್ ಅವರು ಮೇಲ್ಮನವಿ ಸಲ್ಲಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ, ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠ, ಹೈಕೋರ್ಟ್ ಆದೇಶದ ವಿರುದ್ಧ ಸಿಬಿಐ ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿದಂತೆ ಸೆಂಗಾರ್‌ಗೆ ನೋಟಿಸ್ ನೀಡಿದೆ.
2017ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿಯ ವಿಚಾರಣಾ ನ್ಯಾಯಾಲಯವು 2019ರಲ್ಲಿ ಸೆಂಗರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಶಿಕ್ಷೆ ಪ್ರಶ್ನಿಸಿ ಸೆಂಗರ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ನಡೆಸಿದ್ದ ದೆಹಲಿ ಹೈಕೋರ್ಟ್, ಅರ್ಜಿ ಇತ್ಯರ್ಥವಾಗುವರೆಗೆ ಶಿಕ್ಷೆಯನ್ನು ಅಮಾನತಿನಲ್ಲಿರಿಸಿ, ಡಿಸೆಂಬರ್ 23ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅಮಾನತುಗೊಂಡಿದ್ದರೂ ಸಂತ್ರಸ್ತೆ ತಂದೆಯ ಕಸ್ಟಡಿ ಸಾವು ಪ್ರಕರಣದಲ್ಲಿ ಸೆಂಗರ್‌ಗೆ 10 ವರ್ಷಗಳ ಶಿಕ್ಷೆಯಾಗಿದೆ. ಹೀಗಾಗಿ ಅವರು ಜೈಲಿನಲ್ಲಿಯೇ ಇರುತ್ತಾರೆ ಎಂದೂ ಹೇಳಿತ್ತು.
ಸೆಂಗರ್‌ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿರುವುದನ್ನು ಖಂಡಿಸಿ ಸಂತ್ರಸ್ತೆ, ಅವರ ತಾಯಿ ಮತ್ತು ಮಹಿಳಾ ಪರ ಹೋರಾಟಗಾರರು ದೆಹಲಿ ಹೈಕೋರ್ಟ್ ಎದುರು ಪ್ರತಿಭಟನೆ ನಡೆಸಿದ್ದರು. ಜಾಮೀನು ರದ್ದು ಮಾಡಬೇಕು ಎಂದು ಆಗ್ರಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.