ADVERTISEMENT

ಮನಮೋಹನ ಸಿಂಗ್‌ ನಿಧನ: ರಜನಿಕಾಂತ್‌, ಕಮಲ್‌ ಹಾಸನ್‌ ಸೇರಿದಂತೆ ಸಿನಿ ಗಣ್ಯರ ಸಂತಾಪ

ಪಿಟಿಐ
Published 27 ಡಿಸೆಂಬರ್ 2024, 11:14 IST
Last Updated 27 ಡಿಸೆಂಬರ್ 2024, 11:14 IST
<div class="paragraphs"><p>ಮನಮೋಹನ ಸಿಂಗ್‌</p></div>

ಮನಮೋಹನ ಸಿಂಗ್‌

   

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರು ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಗುರುವಾರ ನಿಧನರಾದರು. ಸಿಂಗ್‌ ಅವರ ನಿಧನಕ್ಕೆ ರಜನಿಕಾಂತ್‌, ಕಮಲ್‌ ಹಾಸನ್‌, ಚಿರಂಜೀವಿ ಸೇರಿದಂತೆ ಸಿನಿಮಾ ರಂಗದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

‘ದೇಶ ತನ್ನ ಅತ್ಯುತ್ತಮ ಪುತ್ರರಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಡಾ. ಮನಮೋಹನ ಸಿಂಗ್ ಅವರ ನಿಧನವು ಭಾರತೀಯ ರಾಜಕೀಯದಲ್ಲಿ ಒಂದು ಯುಗವನ್ನು ಅಂತ್ಯಗೊಳಿಸುತ್ತದೆ. ಅವರು ತಮ್ಮ ದೂರದೃಷ್ಟಿಯ ಆರ್ಥಿಕ ಮತ್ತು ಸಾಮಾಜಿಕ ನೀತಿಗಳ ಮೂಲಕ ದೇಶವನ್ನು ಮರುರೂಪಿಸಿದರು’ ಎಂದು ನಟ ಕಮಲ್‌ ಹಾಸನ್‌ ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

ಸಿಂಗ್‌ ಅವರ ನಿಧನ ಕುರಿತು ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೂಪರ್ ಸ್ಟಾರ್‌ ರಜನಿಕಾಂತ್‌, ‘ಮನಮೋಹನ ಸಿಂಗ್‌ ಅವರು ಉತ್ತಮ ವ್ಯಕ್ತಿತ್ವ ಉಳ್ಳವರು, ಮಹಾನ್‌ ಆರ್ಥಿಕ ಸುಧಾರಕ ಮತ್ತು ಆಡಳಿತಗಾರ’ ಎಂದು ಹೇಳಿದ್ದಾರೆ.

‘ಉನ್ನತ ಶಿಕ್ಷಣ ಹೊಂದಿದ್ದ, ಅತ್ಯಂತ ವಿನಯಶೀಲ ಮತ್ತು ವಿನಮ್ರ ನಾಯಕರಾಗಿದ್ದ ಮನಮೋಹನ ಸಿಂಗ್‌ ಅವರ ನಿಧನದಿಂದ ನಾನು ದುಃಖಿತನಾಗಿದ್ದೇನೆ. ಹಣಕಾಸು ಸಚಿವರಾಗಿ ಅವರ ದೂರದೃಷ್ಟಿಯ ಆಲೋಚನೆಗಳು ಮತ್ತು ಎರಡು ಬಾರಿ ಪ್ರಧಾನ ಮಂತ್ರಿಯಾಗಿ ಅವರ ಅತ್ಯಂತ ಯಶಸ್ವಿ ಅಧಿಕಾರಾವಧಿಯು ಇತಿಹಾಸದಲ್ಲಿ ಉಳಿಯುತ್ತದೆ. ಅವರೊಂದಿಗಿನ ನನ್ನ ಸಂವಾದವನ್ನು ಮತ್ತು ಅವರಿಂದ ನಾನು ಪಡೆದ ಸ್ಫೂರ್ತಿ ಮತ್ತು ತಿಳುವಳಿಕೆಯನ್ನು ಯಾವಾಗಳು ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಅವರ ಅಗಲಿಕೆಯು ದೇಶಕ್ಕೆ ಅಪಾರ ನಷ್ಟವಾಗಿದೆ. ಅವರ ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳಿಗೆ ನನ್ನ ಸಂತಾಪಗಳು’ ಎಂದು ನಟ ಚಿರಂಜೀವಿ ಸಂತಾಪ ವ್ಯಕ್ತಪಡಿಸಿದ್ದಾರೆ.

‘ಭಾರತದ ಆರ್ಥಿಕ ಉದಾರೀಕರಣವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಂಗ್‌ ಅವರನ್ನು ಶ್ಲಾಘಿಸಿರುವ ನಟ ಸನ್ನಿ ಡಿಯೋಲ್, ‘ಸಿಂಗ್‌ ಅವರ ಬುದ್ಧಿವಂತಿಕೆ, ಸಮಗ್ರತೆ ಮತ್ತು ರಾಷ್ಟ್ರದ ಬೆಳವಣಿಗೆಗೆ ಅವರ ನೀಡಿದ ಕೊಡುಗೆಗಳನ್ನು ಯಾವಾಗಲೂ ನೆನಪಿಸಿಕೊಳ್ಳಲಾಗುತ್ತದೆ. ಅವರ ನಿಧನಕ್ಕೆ ನನ್ನ ಸಂತಾಪಗಳು’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಮಾಜಿ ಪ್ರಧಾನಿಯವರ ನಿಧನದಿಂದ ದುಃಖವಾಗಿದೆ. ನಮ್ಮ ದೇಶದ ಬೆಳವಣಿಗೆಯ ಪ್ರತಿಯೊಂದು ಅಂಶಗಳಲ್ಲಿ ಅವರ ಕೊಡುಗೆಗಳನ್ನು ಯಾವಾಗಲೂ ಸ್ಮರಿಸಲಾಗುವುದು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ನಟ ಮನೋಜ್‌ ಬಾಜಪೇಯಿ ಅವರು ದುಃಖ ವ್ಯಕ್ತಪಡಿಸಿದ್ದಾರೆ.

ನಟ ಅಲ್ಲು ಅರ್ಜುನ್‌, ನಟಿ ಅನುಷ್ಕಾ ಶರ್ಮಾ, ಕಾಜಲ್‌, ಸಂಜಯ್‌ ದತ್‌, ಸಮಂತಾ ರುತ್‌ ಪ್ರಭು, ಸ್ವರಾ ಭಾಸ್ಕರ್‌, ರಣದೀಪ್‌ ಹೂಡಾ, ಪರಿಣಿತ ಚೋಪ್ರಾ, ಅನಿಲ್‌ ಕಪೂರ್‌, ಅರ್ಜುನ್‌ ಕಪೂರ್‌, ಸೋನಮ್‌ ಕಪೂರ್‌ ಸೇರಿದಂತೆ ಹಲವು ಸಿನಿಮಾ ನಟ, ನಟಿಯರು ಮನಮೋಹನ ಸಿಂಗ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.