ADVERTISEMENT

ಉತ್ತರ ಪ್ರದೇಶ ಪತ್ರಕರ್ತನ ಹತ್ಯೆ: ಪೊಲೀಸ್ ಅಧಿಕಾರಿ ಅಮಾನತು, 6 ಆರೋಪಿಗಳ ಬಂಧನ

ಪಿಟಿಐ
Published 25 ಆಗಸ್ಟ್ 2020, 12:25 IST
Last Updated 25 ಆಗಸ್ಟ್ 2020, 12:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಲ್ಲಿಯಾ (ಉತ್ತರಪ್ರದೇಶ): ಖಾಸಗಿ ಸುದ್ದಿ ವಾಹಿನಿಯ ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಮತ್ತು ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮೃತ ಪತ್ರಕರ್ತ ರತನ್ ಸಿಂಗ್ (45) ಅವರ ತಂದೆ 10 ಜನರ ಮೇಲೆ ನೀಡಿರುವ ದೂರಿನ ಆಧಾರದ ಮೇಲೆ, ಆ ಪೈಕಿ ಸುಶೀಲ್ ಸಿಂಗ್, ದಿನೇಶ್ ಸಿಂಗ್, ಅರವಿಂದ್ ಸಿಂಗ್, ಸುನೀಲ್ ಸಿಂಗ್, ವೀರ್ ಬಹದ್ದೂರ್ ಸಿಂಗ್ ಮತ್ತು ವಿನಯ್ ಸಿಂಗ್ ಎಂಬ ಆರು ಜನ ಆರೋಪಿಗಳನ್ನು ಬಂಧಿಸಿರುವುದಾಗಿ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಸಂಜಯ್ ಯಾದವ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತ ಕುಟುಂಬಕ್ಕೆ ₹ 10 ಲಕ್ಷ ಪರಿಹಾರವನ್ನು ಘೋಷಿಸಿ, ಸಂತಾಪ ಸೂಚಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಲಖನೌನಲ್ಲಿ ವಕ್ತಾರರು ತಿಳಿಸಿದ್ದಾರೆ.

ADVERTISEMENT

ರತನ್ ಸಿಂಗ್ ಅವರನ್ನು ಫೆಫ್ನಾ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಸೋಮವಾರ ರಾತ್ರಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಸಂಬಂಧ ಫೆಫ್ನಾ ಪೊಲೀಸ್ ಠಾಣೆಯ ಶಶಿ ಮೌಲಿ ಪಾಂಡೆ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಇನ್ನುಳಿದ ಆರೋಪಿಗಳನ್ನು ಬಂಧಿಸಲು ಶೋಧಕಾರ್ಯ ಕೈಗೊಳ್ಳಲಾಗಿದೆ ಎಂದು ಎಎಸ್‌ಪಿ ತಿಳಿಸಿದ್ದಾರೆ.

ಅದೇ ಗ್ರಾಮದ ಸೋನು ಸಿಂಗ್ ಎಂಬಾತ ರಾತ್ರಿ 8 ಗಂಟೆ ಸುಮಾರಿಗೆ ತನ್ನ ಮಗನನ್ನು ಆತನ ಮನೆಗೆ ಆಹ್ವಾನಿಸಿದ್ದಾನೆ. ಆತನ ಮನೆ ಸಮೀಪವೇ ಲಾಠಿ ಮತ್ತು ರಿವಾಲ್ವರ್‌ನೊಂದಿಗೆ ಕಾದಿದ್ದ ಆರೋಪಿಗಳು ಪತ್ರಕರ್ತನನ್ನು ಹತ್ಯೆ ಮಾಡಿದ್ದಾರೆ ಎಂದು ತಂದೆ ವಿನೋದ್ ಸಿಂಗ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.