
ನವದೆಹಲಿ: ಉರ್ದುವನ್ನು ವಿಶ್ವದ ಅತ್ಯಂತ ಸುಂದರ ಭಾಷೆ ಎಂದು ಬಣ್ಣಿಸಿರುವ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ದೇಶದ ಪ್ರಗತಿಗೆ ಹಿಂದೂ–ಮುಸ್ಲಿಮರ ನಡುವಿನ ಸಾಮರಸ್ಯ ಅತ್ಯಗತ್ಯ ಎಂದಿದ್ದಾರೆ.
ಜಾಮಿಯಾ ಮಿಲಿಯಾ ಇಸ್ಲಾಮಿಯಾದ (ಜೆಐಎಂ) ವಿಶ್ವವಿದ್ಯಾಲಯದ 105ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇಲ್ಲಿ ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಶ್ಲಾಘಿಸಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಸದಾ ಸ್ಮರಿಸುವ ಧೇಯ್ಯ ಗೀತೆಯು ದೇಶದ ಮೌಲ್ಯಗಳು ಮತ್ತು ಸಾಂಸ್ಕೃತಿಕ ಭಾವೈಕ್ಯತೆಯನ್ನು ಪ್ರತಿಬಿಂಬಿಸುತ್ತದೆ. ವಿಶ್ವವಿದ್ಯಾಲಯ ಸ್ಥಾಪನೆಯಾದಾಗ ಮಹಾತ್ಮ ಗಾಂಧಿ ಮತ್ತು ಸರೋಜಿನಿ ನಾಯ್ಡು ಅವರಂತಹ ಮಹಾನ್ ದಿಗ್ಗಜರು ಸಹ ಇದನ್ನು ಬೆಂಬಲಿಸಿದ್ದರು ಎಂದು ರಿಜಿಜು ಹೇಳಿದ್ದಾರೆ.
ಭಾರತದ ಸಾಂವಿಧಾನಿಕ ಶಕ್ತಿ ಮತ್ತು ವೈವಿಧ್ಯತೆಯನ್ನು ಒತ್ತಿ ಹೇಳಿದ ರಿಜಿಜು, ಸಂವಿಧಾನದಿಂದಾಗಿ, ನಾವು ಸುರಕ್ಷಿತವಾಗಿದ್ದೇವೆ. ಏಕೆಂದರೆ ಸಮಸ್ಯೆಯ ಪ್ರತಿಯೊಂದು ಅಂಶಕ್ಕೂ ಸಂವಿಧಾನ ಪರಿಹಾರವನ್ನು ಒದಗಿಸುತ್ತದೆ ಎಂದಿದ್ದಾರೆ.
ಮಾನ್ಯತೆ ಪಡೆದ ಆರು ಅಲ್ಪಸಂಖ್ಯಾತ ವರ್ಗದಲ್ಲಿ ಮುಸ್ಲಿಮರು ಸುಮಾರು ಶೇ.80ರಷ್ಟಿದ್ದಾರೆ. ಹಿಂದೂಗಳು ಮತ್ತು ಮುಸ್ಲಿಮರು ಸಾಮರಸ್ಯದಿಂದ ಬದುಕುವುದು ಅವರ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಶಾಂತಿ ಕಾಪಾಡಿಕೊಂಡರೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎಂದು ರಿಜಿಜು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.