ಸರ್ಗಿಯೊ ಗೋರ್, ನರೇಂದ್ರ ಮೋದಿ
(ಚಿತ್ರ ಕೃಪೆ: X/@narendramodi)
ನವದೆಹಲಿ: ಭಾರತದೊಂದಿಗಿನ ಬಾಂಧವ್ಯವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಗಿಯೊ ಗೋರ್ ಹೇಳಿದ್ದಾರೆ.
ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವ ಸರ್ಗಿಯೊ ಗೋರ್ ಮಾತುಕತೆ ನಡೆಸಿದ್ದಾರೆ.
ವ್ಯಾಪಾರ, ರಕ್ಷಣಾ, ತಂತ್ರಜ್ಞಾನ ಮತ್ತು ಮುಖ್ಯ ಖನಿಜಗಳ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರಕ್ಕೆ ಗಮನ ಕೇಂದ್ರಿಕರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಭಾರತದ ರಫ್ತು ಮೇಲೆ ಅಮೆರಿಕ ಶೇ 50ರಷ್ಟು ಸುಂಕ ವಿಧಿಸಿದ್ದರಿಂದ ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯದಲ್ಲಿ ಕರಿನೆರಳು ಬಿದ್ದಿದೆ. ಈ ನಡುವೆ ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ಆಯ್ಕೆಯಾಗಿರುವ ಸರ್ಗಿಯೊ ಗೋರ್ ಆರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಬಾಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರೊಂದಿಗೂ ಸರ್ಗಿಯೊ ಚರ್ಚೆ ನಡೆಸಿದ್ದಾರೆ.
'ಭಾರತದೊಂದಿಗಿನ ಬಾಂಧವ್ಯಕ್ಕೆ ಹೆಚ್ಚಿನ ಮಹತ್ವ ಕೊಡುತ್ತೇವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿ ಅವರನ್ನು 'ಮಹಾನ್ ನಾಯಕ' ಹಾಗೂ 'ಸ್ನೇಹಿತ' ಎಂದು ಪರಿಗಣಿಸಿದ್ದಾರೆ ಎಂದು ಸರ್ಗಿಯೊ ಉಲ್ಲೇಖಿಸಿದ್ದಾರೆ.
'ನನ್ನ ದೆಹಲಿ ಪ್ರವಾಸಕ್ಕೂ ಮುನ್ನ ಟ್ರಂಪ್ ಹಾಗೂ ಮೋದಿ ಫೋನ್ ಮೂಲಕ ಸಂಭಾಷಣೆ ನಡೆಸಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
'ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ಸೇವೆ ಸಲ್ಲಿಸುವುದು ಗೌರವದ ವಿಷಯವಾಗಿದೆ. ಭಾರತ ಹಾಗೂ ಅಮೆರಿಕದ ನಡುವಣ ಬಾಂಧವ್ಯ ವೃದ್ಧಿಯನ್ನು ಎದುರು ನೋಡುತ್ತೇನೆ' ಎಂದಿದ್ದಾರೆ.
ಸರ್ಗಿಯೊ ಗೋರ್ ಅವರೊಂದಿಗಿನ ಭೇಟಿ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, 'ಭಾರತ-ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ ಮತ್ತಷ್ಟು ಗಟ್ಟಿಗೊಳ್ಳುವ ವಿಶ್ವಾಸವಿದೆ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.