ಜೆ.ಡಿ. ವ್ಯಾನ್ಸ್
(ರಾಯಿಟರ್ಸ್ ಚಿತ್ರ)
ನವದೆಹಲಿ: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಜೊತೆ ಸೋಮವಾರ ಮಾತುಕತೆ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅದೇ ದಿನ ರಾತ್ರಿ ಅವರಿಗೆ ಔತಣಕೂಟ ಆಯೋಜಿಸಿದ್ದಾರೆ.
ಔತಣಕೂಟದಲ್ಲಿ ವ್ಯಾನ್ಸ್ ಜೊತೆ ಅವರ ಪತ್ನಿ ಉಷಾ ಅವರೂ ಇರಲಿದ್ದಾರೆ. ಉಷಾ ಅವರು ಭಾರತ ಮೂಲದವರು. ವ್ಯಾಪಾರ, ತೆರಿಗೆ, ಪ್ರಾದೇಶಿಕ ಭದ್ರತೆ ಮತ್ತು ದ್ವಿಪಕ್ಷೀಯ ಒಡನಾಟ ಹೆಚ್ಚಿಸುವ ವಿಚಾರವಾಗಿ ಮೋದಿ ಮತ್ತು ವ್ಯಾನ್ಸ್ ಅವರು ಮಾತುಕತೆ ನಡೆಸಲಿದ್ದಾರೆ.
ವ್ಯಾನ್ಸ್, ಉಷಾ ಮತ್ತು ಅವರ ಮೂವರು ಮಕ್ಕಳು ಪಾಲಂ ವಾಯುನೆಲೆಗೆ ಸೋಮವಾರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ತಲುಪಲಿದ್ದಾರೆ. ಅವರು ನಾಲ್ಕು ದಿನ ಭಾರತದಲ್ಲಿ ಇರಲಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಸೇರಿದಂತೆ ಸರಿಸುಮಾರು 60 ದೇಶಗಳನ್ನು ಗುರಿಯಾಗಿಸಿಕೊಂಡು ಪ್ರತಿಸುಂಕವನ್ನು ವಿಧಿಸಿ, ಅದನ್ನು 90 ದಿನಗಳ ಮಟ್ಟಿಗೆ ತಡೆಹಿಡಿದ ನಂತರದಲ್ಲಿ ವ್ಯಾನ್ಸ್ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.
ಭಾರತ ಮತ್ತು ಅಮೆರಿಕದ ನಡುವೆ ಈಗ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಳಿಸುವ ವಿಚಾರವಾಗಿ ಮಾತುಕತೆಗಳು ನಡೆಯುತ್ತಿವೆ.
ದೆಹಲಿ ತಲುಪಿದ ಕೆಲವೇ ತಾಸುಗಳಲ್ಲಿ ಅವರು ಸ್ವಾಮಿನಾರಾಯಣ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅವರು ಭಾರತದ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಮಾರುಕಟ್ಟೆಯೊಂದಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ವ್ಯಾನ್ಸ್ ದಂಪತಿಯನ್ನು ಕೇಂದ್ರ ಸಂಪುಟದ ಹಿರಿಯ ಸಚಿವರೊಬ್ಬರು ಪಾಲಂ ವಾಯುನೆಲೆಯಲ್ಲಿ ಸ್ವಾಗತಿಸಲಿದ್ದಾರೆ. ವ್ಯಾನ್ಸ್ ಕುಟುಂಬವು ಆಗ್ರಾ ಹಾಗೂ ಜೈಪುರಕ್ಕೆ ಭೇಟಿ ನೀಡಲಿದೆ.
ಪ್ರಧಾನಿ ಮೋದಿ ಅವರು ವ್ಯಾನ್ಸ್ ಅವರನ್ನು ತಮ್ಮ ನಿವಾಸದಲ್ಲಿ ಸೋಮವಾರ ಸಂಜೆ 6.30ಕ್ಕೆ ಸ್ವಾಗತಿಸಲಿದ್ದಾರೆ. ನಂತರ ಅಧಿಕೃತ ಮಾತುಕತೆ ನಡೆಯಲಿದೆ. ನವದೆಹಲಿಯಲ್ಲಿ ವ್ಯಾನ್ಸ್ ಕುಟುಂಬವು ಐಟಿಸಿ ಮೌರ್ಯ ಶೆರಟನ್ ಹೋಟೆಲ್‌ನಲ್ಲಿ ತಂಗಲಿದೆ.
ಪ್ರಧಾನಿಗೆ ಕಾಂಗ್ರೆಸ್ ಪ್ರಶ್ನೆ
ಭಾರತೀಯರನ್ನು ಅಮೆರಿಕದಿಂದ ಗಡೀಪಾರು ಮಾಡುತ್ತಿರುವ ಬಗ್ಗೆ ಭಾರತದ ವಿದ್ಯಾರ್ಥಿಗಳನ್ನು ಅಮೆರಿಕದಲ್ಲಿ ನಡೆಸಿಕೊಳ್ಳುತ್ತಿರುವ ಕ್ರಮದ ಬಗ್ಗೆ ನಿಯಮ ಆಧಾರಿತ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ‘ಸಂಪೂರ್ಣವಾಗಿ ನಾಶ ಮಾಡಿರುವ’ ಬಗ್ಗೆ ಭಾರತ ಹೊಂದಿರುವ ಕಳವಳವನ್ನು ಪ್ರಧಾನಿ ಮೋದಿ ಅವರು ವ್ಯಾನ್ಸ್ ಅವರಲ್ಲಿ ಪ್ರಸ್ತಾಪಿಸಲಿದ್ದಾರೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಪ್ಯಾರಿಸ್ ಒಪ್ಪಂದದಿಂದ ಮತ್ತು ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕವು ಹೊರಬಂದಿರುವುದರ ಕುರಿತ ಕಳವಳನ್ನು ಮೋದಿ ಅವರು ಪ್ರಸ್ತಾಪ ಮಾಡಬಹುದೇ ಎಂದೂ ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಈ ಪ್ರಶ್ನೆಗಳನ್ನು ಎತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.