ADVERTISEMENT

ಒಡಿಶಾ ರೈಲು ದುರಂತ: ಮೃತರ ಕುಟುಂಬಕ್ಕೆ ಅಮೆರಿಕ ಅಧ್ಯಕ್ಷ ಬೈಡನ್ ಸೇರಿ ಗಣ್ಯರಿಂದ ಸಂತಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜೂನ್ 2023, 4:34 IST
Last Updated 4 ಜೂನ್ 2023, 4:34 IST
ಜೋ ಬೈಡನ್
ಜೋ ಬೈಡನ್   

ನವದೆಹಲಿ: ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ಎರಡು ಪ್ರಯಾಣಿಕ ರೈಲುಗಳು ಮತ್ತು ಸರಕು ಸಾಗಣೆ ರೈಲಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಂತಾಪ ಸೂಚಿಸಿದ್ದಾರೆ.

ರೈಲು ದುರಂತದಲ್ಲಿ 288 ಪ್ರಯಾಣಿಕರು ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬಾಲಸೋರ್‌ ಜಿಲ್ಲಾ ಆಸ್ಪತ್ರೆ ಹಾಗೂ ಇತರ ಆಸ್ಪತ್ರೆಗಳಲ್ಲಿ ಗಾಯಾಳುಗಳನ್ನು ದಾಖಲಿಸಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

ಒಡಿಶಾ ರೈಲು ದುರಂತಕ್ಕೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್ ಸಂತಾಪ ಸೂಚಿಸಿದ್ದು, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರು ಮತ್ತು ಅಪಘಾತದಲ್ಲಿ ಗಾಯಗೊಂಡವರಿಗಾಗಿ ಪ್ರಾರ್ಥಿಸಿದ್ದಾರೆ ಎಂದು ಶ್ವೇತಭವನದ ವರದಿ ತಿಳಿಸಿದೆ.

ADVERTISEMENT

ಕುಟುಂಬ ಹಾಗೂ ಸಂಸ್ಕೃತಿಯ ಸಂಬಂಧಗಳಲ್ಲಿ ಅಮೆರಿಕಾ ಹಾಗೂ ಭಾರತ ನಂಬಿಕೆ ಇಟ್ಟಿವೆ. ಭಾರತೀಯರ ಈ ದುಃಖದ ಸಮಯದಲ್ಲಿ ಇಡೀ ಅಮೆರಿಕ ಅವರೊಂದಿಗಿದೆ. ರೈಲು ದುರಂತದಲ್ಲಿ ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಜೋ ಬೈಡನ್ ತಿಳಿಸಿದ್ದಾರೆ.

ಬ್ರಿಟನ್ ಪ್ರಧಾನಿ ರಿಷಿ ಸುನಕ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಸೇರಿದಂತೆ ವಿಶ್ವದ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.

ಒಡಿಶಾ ರೈಲು ದುರಂತವು ದಶಕಗಳಲ್ಲಿ ದೇಶದಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ಅಪಘಾತಗಳಲ್ಲಿ ಒಂದಾಗಿದೆ. ಗಾಯಗೊಂಡವರಿಗೆ ಸಹಾಯ ಮಾಡಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಘಟನೆ ಸಂಬಂಧ ತನಿಖೆ ನಡೆಸಲು ರೈಲ್ವೆ ಸಚಿವರು ಸಮಿತಿಯೊಂದನ್ನು ರಚಿಸಿದ್ದಾರೆ.

ಬೆಂಗಳೂರು– ಹೌರಾ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌, ಕೋರೊಮಂಡಲ್‌ ಎಕ್ಸ್‌ಪ್ರೆಸ್‌ ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಶುಕ್ರವಾರ ರಾತ್ರಿ ಅಪಘಾತ ಸಂಭವಿಸಿತ್ತು.

ಇದನ್ನೂ ಓದಿ... ಒಡಿಶಾ ರೈಲು ದುರಂತ: ಬಾಲಸೋರ್‌ನಲ್ಲಿ ಭರದಿಂದ ಸಾಗಿದ ರೈಲು ಹಳಿ ಮರು ನಿರ್ಮಾಣ ಕಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.