ADVERTISEMENT

ಭಾರತದ ಉತ್ಪನ್ನಗಳ ಮೇಲೆ US ಸುಂಕ ಪ್ರಹಾರ: ರಷ್ಯಾಗೆ ತೆರಳಿದ NSA ಅಜಿತ್ ದೋಬಾಲ್‌

ಏಜೆನ್ಸೀಸ್
Published 6 ಆಗಸ್ಟ್ 2025, 7:40 IST
Last Updated 6 ಆಗಸ್ಟ್ 2025, 7:40 IST
<div class="paragraphs"><p>ಅಜಿತ್ ದೋಬಾಲ್</p></div>

ಅಜಿತ್ ದೋಬಾಲ್

   

ನವದೆಹಲಿ: ರಷ್ಯಾದಿಂದ ತೈಲ ಹಾಗೂ ಯುದ್ಧ ಸಾಮಗ್ರಿಗಳ ಖರೀದಿಸುತ್ತಿರುವ ಭಾರತಕ್ಕೆ ಹೆಚ್ಚಿನ ಸುಂಕ ಹಾಗೂ ದಂಡ ವಿಧಿಸುವುದಾಗಿ ಅಮೆರಿಕ ಬೆದರಿಕೆಯೊಡ್ಡಿದ ಬೆನ್ನಲ್ಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಬಾಲ್‌ ಅವರು ಮಂಗಳವಾರ ತಡರಾತ್ರಿ ರಷ್ಯಾಗೆ ಪ್ರಯಾಣಿಸಿದ್ದಾರೆ.

ರಷ್ಯಾದಿಂದ ತೈಲ ಖರೀದಿಸುತ್ತಿರುವ ಪ್ರಮುಖ ರಾಷ್ಟ್ರಗಳಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಈ ಆದಾಯವನ್ನು ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾ ಬಳಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

ADVERTISEMENT

ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಉತ್ಪನ್ನಗಳ ಮೇಲೆ ಮುಂದಿನ 24 ಗಂಟೆಗಳಲ್ಲಿ ಆಮದು ಸುಂಕವನ್ನು ಇನ್ನಷ್ಟು ಹೆಚ್ಚಿಸುವುದಾಗಿ ಹಾಗೂ ಭಾರತ ಅಮೆರಿಕದ ಉತ್ತಮ ವ್ಯಾಪಾರ ಪಾಲುದಾರ ರಾಷ್ಟ್ರವಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ದೋಬಾಲ್ ಅವರು ರಷ್ಯಾದೊಂದಿಗೆ ಮಾತುಕತೆ ನಡೆಸಲು ಪ್ರಯಾಣಿಸಿದ್ದಾರೆ ಎಂದೆನ್ನಲಾಗಿದೆ.

ದೋಬಾಲ್‌ ಪ್ರವಾಸವನ್ನು ಸರ್ಕಾರ ಖಚಿತಪಡಿಸಿಲ್ಲ. ಆದರೆ ಮಂಗಳವಾರ ರಾತ್ರಿ ಮಾಸ್ಕೊಗೆ ತೆರಳಿರುವುದಾಗಿ 'ದಿ ಹಿಂದೂ' ವರದಿ ಮಾಡಿದೆ. ಎನ್‌ಡಿಟಿವಿ ಕೂಡಾ ಇದನ್ನೇ ಹೇಳಿದೆ.

ಮಾಸ್ಕೊಗೆ ತೆರಳಿರುವ ದೋಬಾಲ್ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. ಕಾಕತಾಳೀಯ ಎಂಬಂತೆ ಅಮೆರಿಕದ ಅಧಿಕಾರಿ ಸ್ಟೀವ್ ವಿಟ್‌ಆಫ್‌ ಕೂಡಾ ರಷ್ಯಾದಲ್ಲಿದ್ದು, ಅವರೂ ಅಲ್ಲಿನ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

‘ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕಾಗಿ ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳು ನ್ಯಾಯಸಮ್ಮತವಲ್ಲದ ಹಾಗೂ ಅಸಮಂಜಸವಾಗಿ ನವದೆಹಲಿಯನ್ನು ಗುರಿಯಾಗಿಸಿವೆ. ಸಂಘರ್ಷ ಉಲ್ಭಣಿಸುತ್ತಿದ್ದಂತೆ ಸಾಂಪ್ರದಾಯಿಕವಾಗಿ ಖರೀದಿಸುತ್ತಿದ್ದ ತೈಲವನ್ನು ಐರೋಪ್ಯ ರಾಷ್ಟ್ರಗಳತ್ತ ತಿರುಗಿಸಲಾಯಿತು. ಇದರ ಪರಿಣಾಮವಾಗಿ ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿದೆ’ ಎಂದು ಭಾರತದ ವಿದೇಶಾಂಗ ಸಚಿವಾಲಯವು ಸೋಮವಾರ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.