ADVERTISEMENT

ಉತ್ತರ ಪ್ರದೇಶ: ಎರಡೇ ವಾರದಲ್ಲಿ ಮೂವರ ಮೇಲೆ ದಾಳಿ ಮಾಡಿದ ಮೊಸಳೆ

ಪಿಟಿಐ
Published 30 ಆಗಸ್ಟ್ 2025, 9:51 IST
Last Updated 30 ಆಗಸ್ಟ್ 2025, 9:51 IST
   

ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್‌ನ ಗೆರುವಾ ನದಿಯ ಬಳಿ ಮೊಸಳೆ ದಾಳಿಯಿಂದ 14 ವರ್ಷದ ಬಾಲಕ ಮೃತಪಟ್ಟಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.  

ಈ ಘಟನೆಯು ಕತರ್ನಿಯಾಘಾಟ್ ವನ್ಯಜೀವಿ ಪ್ರದೇಶದಲ್ಲಿ ನಡೆದಿದೆ. ಇದೇ ಪ್ರದೇಶದಲ್ಲಿ ಕಳೆದ ಎರಡು ವಾರಗಳಲ್ಲಿ ಮೊಸಳೆಯಿಂದ ಮನುಷ್ಯರ ಮೇಲೆ ನಡೆದ ಮೂರನೇಯ ದಾಳಿ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಮೃತ ಬಾಲಕನನ್ನು ಅನಿಲ್ ಎಂದು ಗುರುತಿಸಲಾಗಿದೆ. ಅಂಬಾ ಎಂಬ ಗ್ರಾಮದಲ್ಲಿ ಅರಿಶಿನ ಹೊಲದಲ್ಲಿ ತನ್ನ ತಾಯಿಯೊಂದಿಗೆ ಮೇವು ಸಂಗ್ರಹಿಸುತ್ತಿದ್ದ ವೇಳೆ ಮೊಸಳೆಯು ಬಾಲಕನ ಮೇಲೆ ದಾಳಿ ಮಾಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. 

ADVERTISEMENT

ನದಿಯಿಂದ ಹಠಾತ್ತನೆ ಹೊರ ಬಂದ ಮೊಸಳೆ ಬಾಲಕನ ಕುತ್ತಿಗೆಯನ್ನು ಹಿಡಿದು ನದಿಯ ಒಳಕ್ಕೆ ಎಳೆದುಕೊಂಡು ಹೋಗಿತು ಎಂದು ಸ್ಥಳೀಯರು ಹೇಳಿದ್ದಾರೆ. ಬಾಲಕನ ಮೃತ ದೇಹವನ್ನು ಈಜುಗಾ‌ರರು ಹಾಗೂ ಮೋಟರ್‌ ಬೋಟ್‌ಗಳನ್ನು ಬಳಸಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. 

ಆ.17 ರಂದು 7ಅಡಿ ಉದ್ದದ ಮೊಸಳೆ ಖೈರಿಘಾಟ್‌ನ 5 ವರ್ಷದ ಬಾಲಕನ ಮೇಲೆ ದಾಳಿ ನಡೆಸಿತ್ತು. ಆಗ ಬಾಲಕನ ತಾಯಿ ಮಾಯಾ ಮೊಸಳೆಗೆ ಕಬ್ಬಿಣದ ಸರಳಿನಿಂದ ಹೊಡೆದು ಬಾಲಕನನ್ನು ರಕ್ಷಣೆ ಮಾಡಿಕೊಂಡಿದ್ದರು. 

ಮೋಟಿಯಾಪುರದ ಸಮೀಪದಲ್ಲಿ 45 ವರ್ಷದ ವೃದ್ಧನು ಕಾಲುವೆಯನ್ನು ದಾಟುವಾಗ ಮೊಸಳೆ ದಾಳಿ ನಡೆಸಿದೆ. ಈ ದಾಳಿಯಿಂದ ವೃದ್ಧನು ತೀವ್ರವಾಗಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. 

ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಮೊಸಳೆಗಾಗಿ ಹುಡುಕಾಟವನ್ನು ನಡೆಸಲಾಗುತ್ತಿದೆ. ಸ್ಥಳೀಯರಿಗೆ ನದಿಯ ದಡದದಿಂದ ದೂರವಿರುವಂತೆ ಸೂಚನೆಯನ್ನು ನೀಡಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.