ADVERTISEMENT

ಹೆಂಡತಿಯನ್ನು ಕಳುಹಿಸಲು ಕೇಳಿದ ಬಾಸ್; ಆತ್ಮಾಹುತಿ ಮಾಡಿಕೊಂಡ ಉ.ಪ್ರ.ಸರ್ಕಾರಿ ನೌಕರ

ಸಂಜಯ ಪಾಂಡೆ
Published 11 ಏಪ್ರಿಲ್ 2022, 15:39 IST
Last Updated 11 ಏಪ್ರಿಲ್ 2022, 15:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ: ವರ್ಗಾವಣೆ ಬೇಕಾದರೆ ಹೆಂಡತಿಯನ್ನು 'ಒಂದು ರಾತ್ರಿ ಕಳುಹಿಸು'- ಇಂಥದ್ದೊಂದು 'ಬೇಡಿಕೆ'ಯನ್ನು ಅಧಿಕಾರಿಯು ನೌಕರನ ಮುಂದಿಟ್ಟಿದ್ದರು. ಅದರಿಂದ ರೋಸಿ ಹೋದ ನೌಕರ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆ. ಈ ಧಾರುಣ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ.

ಉತ್ತರ ಪ್ರದೇಶದ ವಿದ್ಯುಚ್ಛಕ್ತಿ ಇಲಾಖೆಯ ಲೈನ್‌ಮನ್‌ ಗೋಕುಲ್‌ ಯಾದವ್‌ ಮೃತ ವ್ಯಕ್ತಿ. ಶನಿವಾರ ಲಖಿಂಪುರ ಖೇರಿಯ ಪಲಿಯಾದಲ್ಲಿರುವ ನಿವಾಸದಲ್ಲಿ ಮೈಮೇಲೆ ಡೀಸೆಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ತೀವ್ರವಾಗಿ ಸುಟ್ಟ ಗಾಯಗಳಿಂದ ನರಳುತ್ತಿದ್ದ ಗೋಕುಲ್‌ ಅವರನ್ನು ಲಖನೌನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಭಾನುವಾರ ಸಂಜೆ ಸಾವಿಗೀಡಾಗಿರುವುದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

ಗೋಕುಲ್‌ ಸಾವಿಗೂ ಮುನ್ನ ನೀಡಿರುವ ಹೇಳಿಕೆಯಲ್ಲಿ ಅವರ ಮೇಲಧಿಕಾರಿ, ಜೂನಿಯರ್‌ ಎಂಜಿನಿಯರ್‌(ಜೆಇ) ವಿರುದ್ಧ ಆರೋಪ ಮಾಡಿದ್ದಾರೆ. ಬೇಕಾಗಿರುವ ಜಾಗಕ್ಕೆ ವರ್ಗಾವಣೆ ಮಾಡಬೇಕಾದರೆ, ತನ್ನ (ಗೋಕುಲ್‌) ಹೆಂಡತಿಯನ್ನು ಅವರು ಮತ್ತು ಅವರ ಸ್ನೇಹಿತರ ಬಳಿಗೆ ಒಂದು ರಾತ್ರಿ ಕಳುಹಿಸುವಂತೆ ಕೇಳಿದ್ದಾಗಿ ಹೇಳಿದ್ದಾರೆ.

ADVERTISEMENT

ಗೋಕುಲ್‌ ಅವರ ಕೊನೆಯ ಮಾತು ವಿಡಿಯೊದಲ್ಲಿ ದಾಖಲಾಗಿದೆ. ಸುಟ್ಟ ಗಾಯಗಳಿಂದ ನರಳುತ್ತಿದ್ದ ಅವರು, ನಡೆದಿರುವ ಘಟನೆಗಳನ್ನು ಪ್ರಸ್ತಾಪಿಸಿದ್ದಾರೆ. ಅವರ ಹೆಂಡತಿ ಸಹ ಆರೋಪಗಳನ್ನು ಖಚಿತಪಡಿಸಿದ್ದಾರೆ.

ಮೂಲಗಳ ಪ್ರಕಾರ, ಗೋಕುಲ್‌ ಅವರನ್ನು ಅಲಿಗಂಜ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕರ್ತವ್ಯ ನಿರ್ವಹಿಸಬೇಕಾದ ಸ್ಥಳವು ಅವರ ಊರಿನಿಂದ ಸುಮಾರು 50 ಕಿ.ಮೀ ದೂರದಲ್ಲಿದ್ದ ಕಾರಣ, ಊರಿಗೆ ಸಮೀಪದ ಸ್ಥಳಕ್ಕೆ ವರ್ಗಾಯಿಸುವಂತೆ ಮೇಲಧಿಕಾರಿಗೆ ಕೋರಿದ್ದರು.

ಜೂನಿಯರ್‌ ಎಂಜಿನಿಯರ್‌ 'ಬೇಡಿಕೆ' ಬಗ್ಗೆ ಲೈನ್‌ಮನ್‌ ಪೊಲೀಸರಲ್ಲೂ ದೂರು ನೀಡಿದ್ದರೆಂಬುದು ಮೂಲಗಳಿಂದ ತಿಳಿದು ಬಂದಿದೆ. ಆದರೆ, ಅವರು ಯಾವುದೇ ಕ್ರಮಕೈಗೊಂಡಿರಲಿಲ್ಲ.

ಲಖೀಂಪುರ ಖೇರಿಯ ಅಧಿಕಾರಗಳ ಮಾಹಿತಿ ಪ್ರಕಾರ, ಆ ಜೂನಿಯರ್‌ ಎಂಜಿಯರ್‌ ನಾಗೇಂದ್ರ ಉಮರ್‌ ಎಂದು ಗುರುತಿಸಲಾಗಿದೆ ಹಾಗೂ ಇಲಾಖೆಯ ಮತ್ತೊಬ್ಬ ಸಿಬ್ಬಂದಿಯನ್ನು ಅಮಾನತ್ತು ಮಾಡಲಾಗಿದೆ. ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.