ADVERTISEMENT

ಮಹಿಳೆಗೆ ಹಳ್ಳಿಯಲ್ಲೊಂದು ’ಮುಟ್ಟು ಕೇಂದ್ರ’– ಇದು ಸರ್ಕಾರಿ ಅನುದಾನಿತ ಕಟ್ಟಡ!

ಏಜೆನ್ಸೀಸ್
Published 16 ಜನವರಿ 2019, 15:33 IST
Last Updated 16 ಜನವರಿ 2019, 15:33 IST
   

ಡೆಹ್ರಾಡೂನ್‌: ಇಲ್ಲಿನ ಹಳ್ಳಿಯೊಂದರಲ್ಲಿ ಸರ್ಕಾರದಿಂದ ಅನುದಾನ ಪಡೆದು ಮಹಿಳೆಯರಿಗಾಗಿಯೇ ವಿಶೇಷ ಕಟ್ಟಡ ಕಟ್ಟಲಾಗಿದೆ. ಋತುಸ್ರಾವದ ದಿನಗಳಲ್ಲಿ ಮಹಿಳೆಯರಿಗೆ ಇದೇ ಕಟ್ಟಡದಲ್ಲಿ ವಾಸ.

ಉತ್ತರಾಖಂಡದ ಚಂಪಾವತ್‌ ಜಿಲ್ಲೆಯ ಹಳ್ಳಿಯಲ್ಲಿರುವ ಈ ಕಟ್ಟಡದ ಉದ್ದೇಶ, ಮುಟ್ಟಾದ ಮಹಿಳೆಯರನ್ನು ಮನೆಯಿಂದ ದೂರ ಉಳಿಸುವುದು. ಈ ಕಟ್ಟಡ ನಿರ್ಮಾಣದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗೆದೂರು ನೀಡಲು ಬಂದಾಗ ’ಮುಟ್ಟು ಕೇಂದ್ರ’ದ ವಿಷಯ ಹೊರಬಂದಿದೆ.

’ಘುರ್‌ಚುಮ್‌ ಹಳ್ಳಿಯಲ್ಲಿ ಮುಟ್ಟ ಕೇಂದ್ರ ಇರುವುದನ್ನು ಕೇಳಿ ಆಘಾತಗೊಂಡೆ. ಋತುಸ್ರಾವದ ಮಹಿಳೆಯರು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಿರುವ ಬಗ್ಗೆ ಹಾಗೂ ಅವರನ್ನು ಮನೆಯಿಂದ ದೂರದ ಕಟ್ಟಡವೊಂದರಲ್ಲಿ ಇರಿಸುತ್ತಿರುವ ಕುರಿತು ಗ್ರಾಮದ ದೂರುದಾರರಿಗೆ ಪ್ರಶ್ನಿಸಿದಾಗ, ಅವರಲ್ಲಿ ಸಮರ್ಥಿಸಿಕೊಳ್ಳುವ ಯಾವ ಉತ್ತರವೂ ಇರಲಿಲ್ಲ’ ಎಂದು ಜಿಲ್ಲಾಧಿಕಾರಿ ರಣಬೀರ್‌ ಚೌಹಾಣ್‌ ಪ್ರತಿಕ್ರಿಯಿಸಿರುವುದಾಗಿ ನ್ಯೂಸ್‌ 18 ವರದಿ ಮಾಡಿದೆ.

ADVERTISEMENT

ಗ್ರಾಮದ ಅಭಿವೃದ್ಧಿಗಾಗಿ ಬಳಕೆಯಾಗಬೇಕಾದ ಸರ್ಕಾರದ ಅನುದಾನವು ಇಂಥ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಿರುವ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಪಂಚಾಯಿತಿ ಅಭಿವೃದ್ಧಿಗಾಗಿ ಮೀಸಲಾದ ಹಣದಲ್ಲಿ ಮುಟ್ಟು ಕೇಂದ್ರ ಕಟ್ಟಡ ಕಟ್ಟಿರುವುದು, ಅಲ್ಲಿ ಋತುಸ್ರಾವದ ಮಹಿಳೆಯರನ್ನು ಇರಿಸುತ್ತಿರುವುದು ಮೂಲಭೂತ ಹಕ್ಕುಗಳಿಗೆ ವಿರುದ್ಧ ವಾದುದು ಎಂದು ಚೌಹಾಣ್ ಆಕ್ಷೇಪಿಸಿದ್ದಾರೆ.

ಜಿಲ್ಲೆಯಲ್ಲಿ ಇನ್ನೂ ಇಂಥ ಕೇಂದ್ರಗಳು ಇರುವ ಕುರಿತು ಅಧಿಕಾರಿಗಳ ತಂಡ ತನಿಖೆ ನಡೆಸಲಿದೆ. ಸಮೀಪದ ನೇಪಾಳದಲ್ಲಿರುವ ’ಮುಟ್ಟಿನ ದಿನಗಳ ಗುಡಿಸಲುಗಳಿಗೂ ಈ ಕೇಂದ್ರಗಳಿಗೂ ಸಾಮ್ಯತೆಯಿದೆ. ಚಂಪಾವತ್‌ ಜಿಲ್ಲೆಯು ಇಂಡೋ–ನೇಪಾಳ ಗಡಿಭಾಗಕ್ಕೆ ಹೊಂದಿಕೊಂಡಂತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.