ಉತ್ತರಕಾಶಿ ಮೇಘಸ್ಫೋಟ: ಮಣ್ಣಿನಡಿಯಿಂದ ತೆವಳಿಕೊಂಡು ಬಂದು ಸಾವಿನ ದವಡೆಯಿಂದ ಪಾರಾದ ವ್ಯಕ್ತಿ
ಉತ್ತರಕಾಶಿ (ಉತ್ತರಾಖಂಡ): ಉತ್ತರಕಾಶಿಯ ಧರೇಲಿ ಗ್ರಾಮದ ಗಂಗೋತ್ರಿ ಮಾರ್ಗದಲ್ಲಿ ಸಂಭವಿಸಿರುವ ಭೀಕರ ಮೇಘಸ್ಫೋಟದಲ್ಲಿ, ಗ್ರಾಮದಲ್ಲಿನ ಮನೆಗಳು, ಮರ– ಗಿಡಗಳು, ಕಾರುಗಳು ಕೊಚ್ಚಿಕೊಂಡು ಹೋಗಿವೆ.
ದುರಂತದಲ್ಲಿ 60–70 ಜನ ನಾಪತ್ತೆಯಾಗಿದ್ದು, ಸದ್ಯದ ಮಾಹಿತಿ ಪ್ರಕಾರ ಐವರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ. ಮೇಘಸ್ಫೋಟದ ಭೀಕರ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಈ ವಿಡಿಯೊಗಳಲ್ಲಿ ‘ದಿ ಸಂಡೇ ಗಾರ್ಡಿಯನ್’ ಸುದ್ದಿ ಸಂಸ್ಥೆ ಹಂಚಿಕೊಂಡಿರುವ ವಿಡಿಯೊದಲ್ಲಿ ಕೆಸರು ಮಣ್ಣಿನ ಅಡಿಯಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬರು ಜೀವ ಕೈಯಲ್ಲಿ ಹಿಡಿದುಕೊಂಡು ಹೊರಕ್ಕೆ ಬರುತ್ತಿರುವ ದೃಶ್ಯ ಸೆರೆಯಾಗಿದೆ.
ಎದೆ ಝಲ್ ಎನ್ನಿಸುವ ಈ ವಿಡಿಯೊದಲ್ಲಿ, ನೀರಿನಿಂದ ಕೂಡಿರುವ ಮಣ್ಣಿನರಾಶಿಯಲ್ಲಿ ತೆವಳುತ್ತಾ ವ್ಯಕ್ತಿಯೊಬ್ಬರು ಹೊರಬಂದಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಸಾವು ಸಮೀಪದಲ್ಲಿರುವಾಗ ಬದುಕಲೇ ಬೇಕನ್ನುವ ಕೊನೆ ಕ್ಷಣದ ಪ್ರಯತ್ನ ಎಂಬಂತಿದೆ ಎಂದು ವ್ಯಾಖ್ಯಾನಿಸಿದ್ದಾರೆ.
ಈ ಮೇಘಸ್ಫೋಟದಲ್ಲಿ ಹರಿದುಬಂದ ಅಪಾರ ಪ್ರಮಾಣದ ಕೆಸರು ಮಣ್ಣಿನಲ್ಲಿ ಅರ್ಧ ಗ್ರಾಮವೇ ಹೂತುಹೋಗಿರುವ ಸಾಧ್ಯತೆಯಿದ್ದು, ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.