ADVERTISEMENT

ಕಾಶಿ, ಮಥುರಾ ದೇಗುಲಗಳ ಮೂಲನಿವೇಶನ ವಾಪಸ್: ವಿಎಚ್‌ಪಿ ವಿಶ್ವಾಸ

ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿಕೆ

ಪಿಟಿಐ
Published 25 ಜೂನ್ 2022, 14:35 IST
Last Updated 25 ಜೂನ್ 2022, 14:35 IST
ಅಲೋಕ್ ಕುಮಾರ್
ಅಲೋಕ್ ಕುಮಾರ್   

ಚೆನ್ನೈ: ‘ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಮಥುರಾದ ಶ್ರೀಕೃಷ್ಣನ ಜನ್ಮಸ್ಥಳದ ಮೂಲ ನಿವೇಶನಗಳನ್ನು ಕಾನೂನು ಮತ್ತು ಸಂವಿಧಾನದ ಚೌಕಟ್ಟಿನೊಳಗೆ ಶಾಂತಿಯುತ ಮಾರ್ಗಗಳ ಮೂಲಕ ಹಿಂಪಡೆಯಲು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಶ್ರಮಿಸುತ್ತದೆ’ ಎಂದು ವಿಎಚ್‌ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಶನಿವಾರ ಹೇಳಿದ್ದಾರೆ.

‘ಆದರೆ, ಇದಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿರುವುದರಿಂದ ಎರಡೂ ಕಡೆಯವರು ಕೋರ್ಟಿನ ತೀರ್ಪಿಗಾಗಿ ಕಾಯುವುದು ಸೂಕ್ತ’ ಎಂದೂ ಅವರು ತಿಳಿಸಿದ್ದಾರೆ.

ವಿಎಚ್‌ಪಿ ಕೇಂದ್ರೀಯ ಆಡಳಿತ ಮಂಡಳಿ ಸಭೆ ನಡೆಯುತ್ತಿರುವ ಚೆನ್ನೈ ಸಮೀಪದ ಕಾಂಚೀಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್, ‘ಇತ್ತೀಚೆಗೆ ಭಾರತದಾದ್ಯಂತ ‘ಧಾರ್ಮಿಕ ಮತಾಂಧರು’ ಎಸಗಿರುವ ಹಿಂಸಾಚಾರವನ್ನು ವಿಎಚ್‌ಪಿ ಖಂಡಿಸುತ್ತದೆ. ಇಂಥ ಮತಾಂಧರಿಂದ ಹಾನಿಗೊಳಗಾದ ಹಿಂದೂಗಳಿಗೆ ರಾಜ್ಯ ಸರ್ಕಾರ ನ್ಯಾಯ ಒದಗಿಸಬೇಕು. ಹಿಂದೂ ಸಮಾಜವು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು, ಹಿಂಸಾಚಾರವನ್ನು ವಿರೋಧಿಸಬೇಕು’ ಎಂದು ಕರೆ ನೀಡಿದರು.

ADVERTISEMENT

‘ರಾಜ್ಯ ಸರ್ಕಾರಗಳ ಕಪಿಮುಷ್ಟಿಯಿಂದ ದೇವಾಲಯಗಳನ್ನು ಮುಕ್ತಗೊಳಿಸಿ ಅವುಗಳ ಆಡಳಿತವನ್ನು ಹಿಂದೂ ಸಮಾಜಕ್ಕೆ ಹಸ್ತಾಂತರಿಸುವ ವಿಎಚ್‌ಪಿ ಆಂದೋಲನವನ್ನು ತೀವ್ರಗೊಳಿಸಲಾಗುವುದು. ದೇವಾಲಯಗಳಿಂದ ಬರುವ ಆದಾಯವನ್ನು ಸರ್ಕಾರವು ತನ್ನ ಆಡಳಿತ ವೆಚ್ಚಕ್ಕೆ ಬಳಸದೇ ಹಿಂದೂ ದೇವಾಲಯಗಳ ಪಾಲನೆ ಮತ್ತು ಧರ್ಮದ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು’ ಎಂದೂ ಅವರು ಹೇಳಿದ್ದಾರೆ.

‘ಹಿಂದೂ ದೇವಾಲಯಗಳನ್ನು ಕೆಲವು ರಾಜ್ಯ ಸರ್ಕಾರಗಳು ನಿರ್ವಹಿಸುತ್ತಿರುವುದು ವಿಷಾದಕರ. ಇದನ್ನು ಬ್ರಿಟಿಷ್ ವಸಾಹತುಷಾಹಿಯ ಸಂಕೇತವೆಂದು ವಿಎಚ್‌ಪಿ ಪರಿಗಣಿಸುತ್ತದೆ’ ಎಂದ ಅವರು, ‘ತಮಿಳುನಾಡಿನ ಹಿಂದೂ ದೇವಾಲಯಗಳಲ್ಲಿನ ದೇವತೆಗಳ ಮೂರ್ತಿಗಳ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ.

ಕಾಂಚೀಪುರಂ ಜಿಲ್ಲೆಯ ತುಳಸಾಪುರಂ ಗ್ರಾಮದ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದ್ದ ಅಲೋಕ್ ಕುಮಾರ್, ದೇವಸ್ಥಾನದೊಳಗಿದ್ದ 22 ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸಿರುವುದನ್ನು ಗಮನಿಸಿ, ಇಂತಹ ಕೃತ್ಯವನ್ನು ಮಾನಸಿಕ ಅಸ್ಥಿರತೆಯ ವ್ಯಕ್ತಿಗಳಾಗಲೀ ಅಥವಾ ಕುಡುಕರಿಂದಾಗಲೀ ಎಸಗಲು ಸಾಧ್ಯವಿಲ್ಲ. ಮೂರ್ತಿಗಳ ವಿನಾಶಕ್ಕೆ ಪೂರ್ವನಿಯೋಜಿತ ಕಾರ್ಯವಿಧಾನ ರೂಪಿಸಿಯೇ ಕೃತ್ಯ ಎಸಗಲಾಗಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.