ADVERTISEMENT

ಉಪ ರಾಷ್ಟ್ರಪತಿ ಚುನಾವಣೆ | ರಾಜ್ಯಕ್ಕೆ ಯೂರಿಯಾ ಪೂರೈಸುವವರಿಗೆ ನಮ್ಮ ಬೆಂಬಲ: BRS

ಪಿಟಿಐ
Published 20 ಆಗಸ್ಟ್ 2025, 13:50 IST
Last Updated 20 ಆಗಸ್ಟ್ 2025, 13:50 IST
<div class="paragraphs"><p>ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್‌ ಹಾಗೂ ಇಂಡಿಯಾ ಬಣದ ಅಭ್ಯರ್ಥಿ ಸುದರ್ಶನ್‌ ರೆಡ್ಡಿ (ಒಳಚಿತ್ರದಲ್ಲಿ – ಬಿಆರ್‌ಎಸ್‌ ಪಕ್ಷದ ಚಿಹ್ನೆ)</p></div>

ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್‌ ಹಾಗೂ ಇಂಡಿಯಾ ಬಣದ ಅಭ್ಯರ್ಥಿ ಸುದರ್ಶನ್‌ ರೆಡ್ಡಿ (ಒಳಚಿತ್ರದಲ್ಲಿ – ಬಿಆರ್‌ಎಸ್‌ ಪಕ್ಷದ ಚಿಹ್ನೆ)

   

ಹೈದರಾಬಾದ್‌: ಉಪ ರಾಷ್ಟ್ರಪತಿ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಹಾಗೂ ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟದಲ್ಲಿ ಚುನಾವಣಾ ಚಟವಟಿಕೆಗಳ ಕಾವು ಏರಿದೆ. ಆದಾಗ್ಯೂ, ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷ ಎರಡೂ ಬಣಗಳಿಂದ ಸಮಾನ ಅಂತರ ಕಾಯ್ದುಕೊಂಡಿದೆ.

ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಯಾವುದೇ ಪಕ್ಷವನ್ನು ಬೆಂಬಲಿಸುವ ಬಗ್ಗೆ ಈವರೆಗೆ ತೀರ್ಮಾನ ಮಾಡಿಲ್ಲ. ಆ ಕುರಿತು ಸಭೆ ಸೇರಿ ಚರ್ಚಿಸುತ್ತೇವೆ ಎಂದು ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ. ರಾಮ ರಾವ್‌ (ಕೆಟಿಆರ್‌) ಬುಧವಾರ ತಿಳಿಸಿದ್ದಾರೆ.

ADVERTISEMENT

ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯನ್ನು ವಿರೋಧಿಸುವ ಸುಳಿವನ್ನೂ ನೀಡಿದ್ದಾರೆ.

ಎನ್‌ಡಿಎ ಮೈತ್ರಿಕೂಟವು, ತಮಿಳುನಾಡು ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್‌ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಇಂಡಿಯಾ ಬಣ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುದರ್ಶನ್‌ ರೆಡ್ಡಿ ಅವರನ್ನು ಹುರಿಯಾಳನ್ನಾಗಿಸಿದೆ.

'ಯೂರಿಯಾ ಪೂರೈಸುವವರಿಗೆ ಬೆಂಬಲ'
ಎನ್‌ಡಿಎ ಆಗಲೀ, ಇಂಡಿಯಾ ಮೈತ್ರಿಕೂಟವಾಗಲೀ ಬಿಆರ್‌ಎಸ್‌ ಅನ್ನು ಈವರೆಗೆ ಸಂಪರ್ಕಿಸಿಲ್ಲ ಎಂದು ರಾಮ ರಾವ್‌ ಸ್ಪಷ್ಟಪಡಿಸಿದ್ದಾರೆ.

'ಯಾರೊಬ್ಬರೂ ನಮ್ಮ ಬೆಂಬಲ ಕೇಳಿಲ್ಲ. ಇನ್ನೂ ಸಮಯ ಇದೆ. ಮತದಾನ ಸೆಪ್ಟೆಂಬರ್‌ 9ರಂದು ನಡೆಯಲಿದೆ. ಅದಕ್ಕೂ ಮುನ್ನ ನಮ್ಮ ಪಕ್ಷವು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ' ಎಂದು ಮಾಹಿತಿ ನೀಡಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್‌ – ಎರಡೂ ತೆಲಂಗಾಣವನ್ನು ಕಡೆಗಣಿಸಿವೆ ಎಂದು ಆರೋಪಿಸಿರುವ ಕೆಟಿಆರ್‌, ರಾಜ್ಯಕ್ಕೆ ಎರಡು ಲಕ್ಷ ಟನ್‌ ಯೂರಿಯಾ ಸರಬರಾಜು ಮಾಡುವ ಭರವಸೆ ನೀಡುವ ಯಾವುದೇ ಬಣವನ್ನು ಬೆಂಬಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಲೋಕಸಭೆಯಲ್ಲಿ ಬಿಆರ್‌ಎಸ್‌ನ ಒಬ್ಬ ಸಂಸದನೂ ಇಲ್ಲ. ಆದರೆ, ರಾಜ್ಯಸಭೆಯಲ್ಲಿ ನಾಲ್ವರು ಸದಸ್ಯರಿದ್ದಾರೆ.

ಪಕ್ಷದ ನಿರ್ಧಾರವು ರಾಜ್ಯದ ಜನರ ಆಲೋಚನೆ, ನಿರೀಕ್ಷೆಗಳನ್ನು ಅವಲಂಭಿಸಿದೆ ಎಂದೂ ಹೇಳಿದ್ದಾರೆ.

'ಕಾಂಗ್ರೆಸ್‌ ನೀಚ ಪಕ್ಷ'
'ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಯಾರನ್ನು ಬೆಂಬಲಿಸುತ್ತಾರೋ ಅವರನ್ನು ನಾವು ವಿರೋಧಿಸುತ್ತೇವೆ. ಏಕೆಂದರೆ ಕಾಂಗ್ರೆಸ್‌ ನೀಚ ಪಕ್ಷ. ಅಂತಹ ಪಕ್ಷದ ಅಭ್ಯರ್ಥಿಯನ್ನು ನಾವು ಬೆಂಬಲಿಸುತ್ತೇವೆಂದು ಹೇಗೆ ಭಾವಿಸುವಿರಿ' ಎಂದು ಪ್ರಶ್ನಿಸಿದ್ದಾರೆ.

ಧನಕರ್‌ ರಾಜೀನಾಮೆಯಿಂದಾಗಿ ಚುನಾವಣೆ
ಉಪ ರಾಷ್ಟ್ರಪತಿಯಾಗಿದ್ದ ಜಗದೀಪ್‌ ಧನಕರ್‌ ಅವರ ದಿಢೀರ್‌ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಜುಲೈ 21ರಂದು ರಾಜೀನಾಮೆ ನೀಡಿದ್ದ ಧನಕರ್ ಅವರ ಅಧಿಕಾರಾವಧಿ ಇನ್ನೂ ಎರಡು ವರ್ಷವಿತ್ತು.
  • ಉಪ ರಾಷ್ಟ್ರಪತಿ ಚುನಾವಣೆ ಅಧಿಸೂಚನೆ ಪ್ರಕಟ: ಆಗಸ್ಟ್‌ 7

  • ನಾಮಪತ್ರ ಸಲ್ಲಿಕೆ ಕೊನೇ ದಿನ: ಆಗಸ್ಟ್‌ 21

  • ನಾಮಪತ್ರ ಪರಿಶೀಲನೆ: ಆಗಸ್ಟ್‌ 22

  • ನಾಮಪತ್ರ ಹಿಂಪಡೆಯಲು ಕೊನೇ ದಿನ: ಆಗಸ್ಟ್‌ 25

  • ಮತದಾನ ದಿನಾಂಕ: ಸೆಪ್ಟೆಂಬರ್‌ 9 (ಸಮಯ: ಬೆಳಿಗ್ಗೆ 10 – ಸಂಜೆ 5)

  • ಮತ ಎಣಿಕೆ: ಸೆಪ್ಟೆಂಬರ್‌ 9

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.