ADVERTISEMENT

80–20ರ ಗೆಲುವು: ಉತ್ತರಪ್ರದೇಶ ಚುನಾವಣೆ ಫಲಿತಾಂಶದ ಕುರಿತು ಓವೈಸಿ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 9:52 IST
Last Updated 11 ಮಾರ್ಚ್ 2022, 9:52 IST
ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ   

ಹೈದರಾಬಾದ್:ಆಲ್ ಇಂಡಿಯಾ ಮಜಿಲಿಸ್-ಇ-ಇತ್ಹೇದುಲ್‌ ಮುಸ್ಲೀಮೀನ್ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿಉತ್ತರಪ್ರದೇಶ ವಿಧಾನಸಭೆ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಇದು80-20 ಅಂತರದ ಗೆಲುವಾಗಿದ್ದು, ಇದೇ ರೀತಿಯ ವಾತಾವರಣ ಮತ್ತಷ್ಟು ವರ್ಷಗಳವರೆಗೆ ಇರಲಿದೆ ಎಂದು ಹೇಳಿದ್ದಾರೆ.

ಎಐಎಂಐಎಂಗೆ ಉತ್ತರಪ್ರದೇಶ ಚುನಾವಣೆಯಲ್ಲಿ ಯಾವುದೇ ಸ್ಥಾನವನ್ನುಗೆಲ್ಲಲು ಸಾಧ್ಯವಾಗಿಲ್ಲ. ಈ ಬಗ್ಗೆ ಮಾತನಾಡಿರುವ ಅವರು, ಜನರ ತೀರ್ಮಾನವನ್ನು ಸ್ವಾಗತಿಸುತ್ತೇನೆ. ಕಠಿಣ ಪರಿಶ್ರಮದ ಮೂಲಕ ನಮ್ಮ ದೌರ್ಬಲ್ಯಗಳನ್ನು ತೊಡೆದುಹಾಕುತ್ತೇವೆ. ಭವಿಷ್ಯದಲ್ಲಿ ಜನರ ವಿಶ್ವಾಸ ಗಳಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ಬಿಜೆಪಿ ಗೆಲುವಿಗೆ ಸಂಬಂಧಿಸಿದಂತೆ,'ರಾಜಕೀಯ ಪಕ್ಷಗಳು ಇವಿಎಂ ಕುರಿತು ಆರೋಪ ಮಾಡುವ ಮೂಲಕ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುತ್ತಿವೆ. ನಾನು 2019ರಲ್ಲಿಯೂ ಹೇಳಿದ್ದೆ, ದೋಷ ಇರುವುದು ಇವಿಎಂಗಳಲ್ಲಿ ಅಲ್ಲ. ಜನರ ತಲೆಯಲ್ಲಿ ಅಳವಡಿಸಿರುವ ಚಿಪ್‌ (ವಿಚಾರಗಳು) ಪ್ರಮುಖ ಪಾತ್ರವಹಿಸುತ್ತಿವೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನೀಡಿದ್ದ 80–20 ಹೇಳಿಕೆಗೆ ಪ್ರತಿಕ್ರಿಯಿಸಿರುವ ಓವೈಸಿ,'ಯಶಸ್ಸು ಖಂಡಿತಾ ಸಿಕ್ಕಿದೆ. ಆದರೆ, ಇದು 80–20 ಅಂತರದ ಯಶಸ್ಸಾಗಿದೆ' ಎಂದು ತಿರುಗೇಟು ನೀಡಿದ್ದಾರೆ.

ಜನವರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಯೋಗಿ, ಉತ್ತರ ಪ್ರದೇಶವು 80 vs 20 ಹೋರಾಟಕ್ಕೆ ಸಾಕ್ಷಿಯಾಗಲಿದೆ ಎಂದಿದ್ದರು. 'ಶೇ 80 ರಷ್ಟು ಇರುವ ಬೆಂಬಲಿಗರು ಮತ್ತು ಶೇ 20 ರಷ್ಟು ಇರುವ ಇತರರ ವಿರುದ್ಧದ ಹೋರಾಟವಾಗಲಿದೆ. ನನ್ನ ಪ್ರಕಾರ ಶೇ 80 ಜನರು ಧನಾತ್ಮಕ ಉತ್ಸಾಹದೊಂದಿಗೆ ಮುನ್ನುಗ್ಗಲಿದ್ದಾರೆ. ಉಳಿದ ಶೇ 20 ರಷ್ಟು ಮಂದಿ ವಿರೋಧಿಸಿಕೊಂಡೇ ಇರುತ್ತಾರೆ' ಎಂದಿದ್ದರು.

ಉತ್ತರ ಪ್ರದೇಶದಲ್ಲಿ ಶೇ 20ರಷ್ಟು ಮುಸ್ಲಿಂ ಮತದಾರರು ಇದ್ದಾರೆ.

ಉತ್ತರ ಪ್ರದೇಶದುದ್ದಕ್ಕೂ ಪ್ರಚಾರ ನಡೆಸಿದ್ದಓವೈಸಿ, ಇದೀಗಚುನಾವಣೆ ವೇಳೆ ಸಹಕಾರ ನೀಡಿದ ತಮ್ಮ ಪಕ್ಷದ ಮುಖಂಡರಿಗೆ ಧನ್ಯವಾದ ಹೇಳಿದ್ದಾರೆ. ಹಾಗೆಯೇ ತಮ್ಮ ಪಕ್ಷವು ಗುಜರಾತ್, ರಾಜಸ್ಥಾನ ಮತ್ತು ಇತರ ರಾಜ್ಯಗಳಲ್ಲಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.