ADVERTISEMENT

ಬಾಳಾಸಾಹೇಬ್ ಸಿದ್ಧಾಂತಕ್ಕೆ ಸಂದ ಜಯ: ಶಿವಸೇನಾ ಚಿಹ್ನೆ ದೊರೆತದ್ದಕ್ಕೆ ಶಿಂದೆ ಹರ್ಷ

ಪಿಟಿಐ
Published 17 ಫೆಬ್ರುವರಿ 2023, 15:29 IST
Last Updated 17 ಫೆಬ್ರುವರಿ 2023, 15:29 IST
ಏಕನಾಥ ಶಿಂದೆ
ಏಕನಾಥ ಶಿಂದೆ    

ಮುಂಬೈ: ತಮ್ಮ ಬಣವನ್ನು ನಿಜವಾದ ಶಿವಸೇನಾ ಎಂದು ಘೋಷಿಸಿದ ಚುನಾವಣಾ ಆಯೋಗದ ನಿರ್ಧಾರವನ್ನು ಸ್ವಾಗತಿಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ, ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತಕ್ಕೆ ಮತ್ತು ಸತ್ಯಕ್ಕೆ ಸಂದ ವಿಜಯ ಎಂದು ಬಣ್ಣಿಸಿದ್ದಾರೆ.

‘ಏಕನಾಥ ಶಿಂದೆ ಅವರೇ ಶಿವಸೇನಾಯ ನಿಜವಾದ ನಾಯಕ’ ಎಂಬುದನ್ನು ಚುನಾವಣಾ ಆಯೋಗದ ಈ ಘೋಷಣೆಯು ದೃಢೀಕರಿಸಿದೆ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ.

‘ನಾನು ಚುನಾವಣಾ ಆಯೋಗಕ್ಕೆ ಧನ್ಯವಾದ ಹೇಳುತ್ತೇನೆ. ಪ್ರಜಾಪ್ರಭುತ್ವದಲ್ಲಿ ಹೆಚ್ಚಿನ ಸಂಖ್ಯೆ ಹೊಂದಿರುವವರನ್ನೇ ಪರಿಗಣಿಸಲಾಗುತ್ತದೆ’ ಎಂದು ಶಿಂದೆ ಹೇಳಿದರು.

ADVERTISEMENT

‘ಇದು ಬಾಳಾಸಾಹೇಬರ ಪರಂಪರೆಯ ವಿಜಯ. ನಮ್ಮದು ನಿಜವಾದ ಶಿವಸೇನಾ. ಬಾಳಾಸಾಹೇಬರ ಚಿಂತನೆಗಳನ್ನು ಮುಂದಿಟ್ಟುಕೊಂಡು ನಾವು ಕಳೆದ ವರ್ಷ ಮಹಾರಾಷ್ಟ್ರದಲ್ಲಿ (ಬಿಜೆಪಿಯೊಂದಿಗೆ) ಹೊಸ ಸರ್ಕಾರವನ್ನು ಸ್ಥಾಪಿಸಿದ್ದೇವೆ. ಇದು ಸತ್ಯ ಮತ್ತು ಜನತೆಯ ಗೆಲುವು ಹಾಗೂ ಬಾಳಾಸಾಹೇಬರ ಆಶೀರ್ವಾದ’ ಎಂದು ಶಿಂದೆ ತಿಳಿಸಿದರು.

2022ರ ಜೂನ್‌ನಲ್ಲಿ ಉದ್ಧವ್ ಠಾಕ್ರೆ ಅವರ ನಾಯಕತ್ವದ ವಿರುದ್ಧ ಶಿಂದೆ ಬಂಡೆದಿದ್ದರು. ಪರಿಣಾಮವಾಗಿ ಠಾಕ್ರೆ ನೇತೃತ್ವದ ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾಗಿತ್ತು.

ಇದೇ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ನಿಜವಾದ ಶಿವಸೇನಾವನ್ನು ಏಕನಾಥ್ ಶಿಂದೆ ಮುನ್ನಡೆಸಿದ್ದರು ಎಂಬುದು ಈಗ ಸಾಬೀತಾಗಿದೆ. ಸಂಖ್ಯಾಬಲದ ಮೇಲೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.