ADVERTISEMENT

ರೈಲು ಪ್ರಯಾಣಿಕನನ್ನು ಬೂಟುಗಾಲಿನಿಂದ ಒದ್ದಿದ್ದ ಕೇರಳ ಪೊಲೀಸ್ ಅಧಿಕಾರಿ ಅಮಾನತು

ವಿಡಿಯೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜನವರಿ 2022, 8:28 IST
Last Updated 4 ಜನವರಿ 2022, 8:28 IST
ವ್ಯಕ್ತಿಯೊಬ್ಬರನ್ನು ಬೂಟುಗಾಲಿನಿಂದ ಒದೆಯುತ್ತಿರುವ ಪೊಲೀಸ್ ಅಧಿಕಾರಿ (ಟ್ವಿಟರ್ ಚಿತ್ರ)
ವ್ಯಕ್ತಿಯೊಬ್ಬರನ್ನು ಬೂಟುಗಾಲಿನಿಂದ ಒದೆಯುತ್ತಿರುವ ಪೊಲೀಸ್ ಅಧಿಕಾರಿ (ಟ್ವಿಟರ್ ಚಿತ್ರ)   

ತಿರುವನಂತಪುರ: ರೈಲಿನಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಬೂಟುಗಾಲಿನಿಂದ ಒದ್ದಿದ್ದ ಕೇರಳದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಟಿಕೆಟ್ ಪಡೆಯದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎಂದು ಆರೋಪಿಸಲಾದ ವ್ಯಕ್ತಿಯನ್ನು ಪೊಲೀಸ್‌ ಅಧಿಕಾರಿಯೊಬ್ಬರು ಪದೇ ಪದೇ ಬೂಟುಗಾಲಿನಿಂದ ಒದೆಯುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಸುಮಾರು 19 ಸೆಕೆಂಡುಗಳ ವಿಡಿಯೊದಲ್ಲಿ ಪೋಲೀಸ್ ಅಧಿಕಾರಿ ರೈಲಿನಲ್ಲಿ ಕೆಳಗೆ ಕುಳಿತಿದ್ದ ಪ್ರಯಾಣಿಕನನ್ನು ಬೂಟುಗಾಲಿನಿಂದ ಒದೆಯುತ್ತಿರುವ ದೃಶ್ಯ ಸೆರೆಯಾಗಿದೆ. ಪೊಲೀಸರ ಈ ಅಮಾನವೀಯ ಕೃತ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ADVERTISEMENT

ಮಾವೇಲಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭಾನುವಾರ ಈ ಘಟನೆ ನಡೆದಿದೆ. ಟಿಕೆಟ್‌ ಪಡೆದಿರುವುದನ್ನು ಪರಿಶೀಲಿಸಲು ಪೊಲೀಸರು ಕಣ್ಣೂರಿನಲ್ಲಿ ರೈಲು ಹತ್ತಿರುವುದಾಗಿ ತಿಳಿದು ಬಂದಿದೆ. ಟಿಕೆಟ್ ಕೊಡದ ವ್ಯಕ್ತಿಯನ್ನು ಪೊಲೀಸರು ಥಳಿಸಿದ್ದಾರೆ.

’ಕೇರಳವು ಭಾರತದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯವಾಗಿದೆ. ಆದರೆ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರನ್ನು ಪೊಲೀಸರು ಅಮಾನುಷವಾಗಿ ಥಳಿಸಿದ್ದಾರೆ. ವಿಡಿಯೊ ನೋಡಿ ಮನಸ್ಸಿಗೆ ನೋವುಂಟು ಮಾಡಿದೆ‘ ಎಂದು ಕಾರ್ತಿಕ್ ಶರ್ಮಾ ಎಂಬುವರು ಟ್ವೀಟ್ ಮಾಡಿದ್ದಾರೆ.

’ಮಾವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರನ್ನು ಪೊಲೀಸರು ಅಮಾನುಷವಾಗಿ ಥಳಿಸಿದ್ದರು. ಘಟನೆಯನ್ನು ನೋಡಿ, ಪೊಲೀಸರನ್ನು ತಡೆಯದೇ ಸುಮ್ಮನೇ ನಿಂತಿದ್ದ ಟಿಟಿಇಯನ್ನು ಕೆಲಸದಿಂದ ವಜಾಗೊಳಿಸಿ‘ ಎಂದು ಟ್ವೀಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

’ರೈಲಿನಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸಿದ್ದ ವ್ಯಕ್ತಿಯ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದು ಅಕ್ಷ್ಯಮ್ಯ ಅಪರಾಧ. ಸಮಸ್ಯೆಯನ್ನು ಕಾನೂನುಬದ್ಧವಾಗಿ ನಿಭಾಯಿಸುವ ಬದಲು ಕೇರಳ ಪೊಲೀಸರು ಜನರ ಮೇಲೆ ಬಲಪ್ರಯೋಗ ಮಾಡಿರುವುದು ಸರಿಯಲ್ಲ‘ ಎಂದು ಕೇರಳ ಬಿಜೆಪಿ ನಾಯಕ ಎಸ್.ಸುರೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.