ADVERTISEMENT

ಅಗ್ನಿಪಥಕ್ಕೆ ವಿರೋಧ: ಬಂದ್ ನಡುವೆಯೇ ಬಿಹಾರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ

ಐಎಎನ್ಎಸ್
Published 18 ಜೂನ್ 2022, 6:05 IST
Last Updated 18 ಜೂನ್ 2022, 6:05 IST
ಜೆಹನಾಬಾದ್‌ನಲ್ಲಿ ಬಸ್‌ಗೆ ಬೆಂಕಿ ಹಚ್ಚಿರುವುದು (ಐಎಎನ್‌ಎಸ್‌ ಚಿತ್ರ)
ಜೆಹನಾಬಾದ್‌ನಲ್ಲಿ ಬಸ್‌ಗೆ ಬೆಂಕಿ ಹಚ್ಚಿರುವುದು (ಐಎಎನ್‌ಎಸ್‌ ಚಿತ್ರ)   

ಪಟ್ನಾ:ಸೈನಿಕರ ನೇಮಕಾತಿಯ ಹೊಸ ನೀತಿ 'ಅಗ್ನಿಪಥ ಯೋಜನೆ' ವಿರುದ್ಧ ಭಾರಿ ಹಿಂಸಾಚಾರ ನಡೆದ ಬೆನ್ನಲ್ಲೇ, ಬಿಹಾರ ಬಂದ್‌ಗೆ ಕರೆ ನೀಡಲಾಗಿದೆ. ಆದಾಗ್ಯೂ, ಪ್ರತಿಭಟನಾಕಾರರು ಜೆಹನಾಬಾದ್‌ನಲ್ಲಿ ಬಸ್‌, ಟ್ರಕ್‌ ಹಾಗೂ ಮತ್ತೆರಡು ವಾಹನಗಳಿಗೆ ಶನಿವಾರ ಬೆಂಕಿ ಹಚ್ಚಿದ್ದಾರೆ.

ಪಟ್ನಾ–ಗಯಾ ಹೆದ್ದಾರಿಯಲ್ಲಿರುವತೆಹ್ತಾ ಪೊಲೀಸ್‌ ಔಟ್‌ಪೋಸ್ಟ್‌ ಬಳಿ ಈ ಪ್ರಕರಣ ವರದಿಯಾಗಿದೆ. ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಾಟವನ್ನೂ ನಡೆಸಿದ್ದಾರೆ. ಈ ವೇಳೆ ಠಾಣೆಯ ಉಸ್ತುವಾರಿ, ಸಬ್‌ ಇನ್‌ಸ್ಪೆಕ್ಟರ್‌ ಧೀರಜ್‌ ಕುಮಾರ್‌ ಗಾಯಗೊಂಡಿದ್ದಾರೆ.

ಗಲಭೆ ವರದಿಯಾಗುತ್ತಿದ್ದಂತೆಯೇ ಜೆಹನಾಬಾದ್‌ ಜಿಲ್ಲಾಧಿಕಾರಿ ಹಾಗೂ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌, ಹೆಚ್ಚಿನ ಸಂಖ್ಯೆಯ ಪೊಲೀಸ್‌ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಲಾಗಿದೆ.

ADVERTISEMENT

ಜೆಹನಾಬಾದ್‌ ಹೊರತುಪಡಿಸಿ, ಬಿಹಾರದ ಬೇರೆ ಜಿಲ್ಲೆಗಳಲ್ಲಿ ಹಿಂಸಾಚಾರದ ವರದಿಯಾಗಿಲ್ಲ.

ಗಲಭೆ ಪೀಡಿತ ಕೈಮುರ್‌, ರೊಹ್ತಾಸ್‌, ಭೋಜ್‌ಪುರ್, ಔರಂಗಾಬಾದ್‌, ಬಕ್ಸಾರ್‌, ನವಾಡ, ಪಶ್ಚಿಮ ಚಂಪಾರಣ್‌, ಸಮಸ್ತಿಪುರ್‌, ಲಖಿಸರಾಯ್, ಬೇಗುಸರಾಯ್‌, ವೈಶಾಲಿ ಹಾಗೂ ಸರಾನ್‌ ಜಿಲ್ಲೆಗಳಲ್ಲಿ ಫೋನ್‌ ಹಾಗೂ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ.

ರಾಜಧಾನಿ ಪಟ್ನಾ ಸೇರಿದಂತೆ, ಈ ಜಿಲ್ಲೆಗಳಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಯುವಕರನ್ನು ಸೇನೆಗೆ ಅಲ್ಪಾವಧಿಗೆ ನೇಮಕ ಮಾಡಿಕೊಳ್ಳುವ ‘ಅಗ್ನಿಪಥ ಯೋಜನೆ’ಯನ್ನು ಕೇಂದ್ರ ಸರ್ಕಾರವು ಮಂಗಳವಾರ (ಜೂನ್‌ 14) ಪ್ರಕಟಿಸಿತ್ತು. ಇದನ್ನು ವಿರೋಧಿಸಿ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ಮೂರು ದಿನಗಳಿಂದ ಹಿಂಸಾಚಾರ ವರದಿಯಾಗಿದ್ದು, ರೈಲುಗಳು ಸೇರಿದಂತೆ ಸಾರ್ವಜನಿಕ ಆಸ್ತಿಗಳ ಮೇಲೆ ದಾಳಿ ನಡೆದಿವೆ. ಈ ಹಿನ್ನೆಲೆಯಲ್ಲಿ ಹಲವು ಯುವ ಸಂಘಟನೆಗಳು ಬಿಹಾರ ಬಂದ್‌ಗೆ ಕರೆ ನೀಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.