ADVERTISEMENT

ವಿಶ್ವ ಭಾರತಿ ವಿವಿ ಕುಲಪತಿಗೆ ಬೆದರಿಕೆ; ರಕ್ಷಣೆ ಕೋರಿ ಪ್ರಧಾನಿಗೆ ಪತ್ರ

ಟಿಎಂಸಿ ಜಿಲ್ಲಾಧ್ಯಕ್ಷ ಅನುಬ್ರತ್ ಮೊಂಡಲ್ ವಿರುದ್ಧ ಆರೋಪ

ಪಿಟಿಐ
Published 1 ಏಪ್ರಿಲ್ 2021, 6:08 IST
Last Updated 1 ಏಪ್ರಿಲ್ 2021, 6:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) ನಾಯಕ ಅನುಬ್ರತ ಮೊಂಡಲ್ ತಮಗೆ ಬೆದರಿಕೆ ಹಾಕಿದ್ದು, ರಕ್ಷಣೆ ಒದಗಿಸಬೇಕು ಎಂದು ಕೋರಿ ವಿಶ್ವ ಭಾರತಿ ವಿಶ್ವವಿದ್ಯಾಲಯದ ಕುಲಪತಿ ವಿದ್ಯುತ್‌ ಚಕ್ರವರ್ತಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಈ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ಪ್ರಧಾನಿ ಅವರಿಗೆ ಮಾರ್ಚ್‌ 24ರಂದು ಈ ಪತ್ರ ಬರೆಯಲಾಗಿದ್ದು, ‘ಚುನಾವಣೆ ನಂತರ ನೀವು ಭೀಕರ ಪರಿಣಾಮಗಳನ್ನು ಎದುರಿಸುತ್ತೀರಿ ಎಂದುಟಿಎಂಸಿ ಜಿಲ್ಲಾಧ್ಯಕ್ಷ ಅನುಬ್ರತಾ ಮೊಂಡಲ್ ಅವರು ನನಗೆ ಬೆದರಿಕೆ ಹಾಕಿದ್ದಾರೆ. ಈ ವಿಷಯವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ‘ ಎಂದು ಉಲ್ಲೇಖಿಸಿದ್ದಾರೆ.

‘ಇಂಥ ಪರಿಸ್ಥಿತಿಯಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಅಹಿತಕರ ಘಟನೆಗಳು ನಡೆಯವುದನ್ನು ತಪ್ಪಿಸಲು ಹಾಗೂ ನನ್ನ ಮತ್ತು ನನ್ನ ಕುಟುಂಬ ಸದಸ್ಯರಿಗೆ ಭದ್ರತೆ ಒದಗಿಲು ಸೂಕ್ತ ಕ್ರಮ ಕೈಗೊಳ್ಳಬೇಕು‘ ಎಂದು ಕುಲಪತಿ ಅವರು ಮನವಿ ಮಾಡಿದ್ದಾರೆ.

ADVERTISEMENT

ಮಾರ್ಚ್ 23 ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ಅನುಬ್ರತ ಮೊಂಡಲ್, ‘ಹುಚ್ಚನೊಬ್ಬ ವಿಶ್ವಭಾರತಿ ವಿಶ್ವವಿದ್ಯಾಲಯದ ಕುಲಪತಿ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾನೆ. ಕಲ್ಕತ್ತ ಹೈಕೋರ್ಟ್‌ನ ಆದೇಶದ ಹೊರತಾಗಿಯೂ, ಆ ವ್ಯಕ್ತಿ ಹಗಲಿನಲ್ಲಿ ವಿಶ್ವವಿದ್ಯಾಲಯದ ಎಲ್ಲಾ ಗೇಟ್‌ಗಳನ್ನು ಬಂದ್‌ ಮಾಡಿಸುತ್ತಾನೆ‘ ಎಂದು ಟೀಕಿಸಿದ್ದರು.

'ಚುನಾವಣೆ ನಂತರ ನಾವು ನಿಮಗೆ ಪ್ರಜಾಪ್ರಭುತ್ವ ರೀತಿಯಲ್ಲೇ ಪಾಠ ಕಲಿಸುತ್ತೇವೆ, ಅದನ್ನು ನೀವು ನಿಮ್ಮ ಜೀವನದಲ್ಲಿ ಮರೆಯಲಾರಿರಿ' ಎಂದು ಚಕ್ರವರ್ತಿಯ ಹೆಸರನ್ನು ಉಲ್ಲೇಖಿಸಿ ಮೊಂಡಲ್ ಹೇಳಿದ್ದರು.

ಈ ಬಗ್ಗೆ ಮೊಂಡಲ್‌ ಅವರಿಂದ ಪ್ರತಿಕ್ರಿಯೆ ಲಭಿಸಿಲ್ಲ. ಮೊಂಡಲ್‌ ಅವರು ಬೆದರಿಕೆ ಹಾಕಿಲ್ಲ, ಸ್ಥಳೀಯ ಜನರ ಭಾವನೆಯನ್ನಷ್ಟೇ ವ್ಯಕ್ತಪಡಿಸಿದ್ದಾರೆ ಎಂದು ಟಿಎಂಸಿಯ ಸ್ಥಳೀಯ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.