
ಸಂದರ್ಶಕರ ಪುಸ್ತಕದಲ್ಲಿ ಮಹಾತ್ಮಾ ಗಾಂಧಿ ಬಗ್ಗೆ ಬರೆದ ಪುಟಿನ್
ಚಿತ್ರ ಕೃಪೆ: mfa_russia
ನವದೆಹಲಿ: ಎರಡು ದಿನಗಳ ಭಾರತ ಭೇಟಿ ಕೈಗೊಂಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಶುಕ್ರವಾರ ರಾಜ್‌ಘಾಟ್‌ಗೆ ತೆರಳಿ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿದ್ದಾರೆ.
ಬಳಿಕ ಅಲ್ಲಿರುವ ಸಂದರ್ಶಕರ ಪುಸ್ತಕದಲ್ಲಿ, ‘ಗಾಂಧಿ ಆಧುನಿಕ ಸ್ವಾತಂತ್ರ್ಯ ಭಾರತದ ಸ್ಥಾಪಕರಾಗಿದ್ದಾರೆ. ಜತೆಗೆ ಮಾನವತಾವಾದಿ ಮತ್ತು ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರೂ ಹೌದು’ ಎಂದು ಬರೆದಿದ್ದಾರೆ.
‘ಅಹಿಂಸೆ ಮತ್ತು ಸತ್ಯದ ದಾರಿಯಲ್ಲಿ ನಡೆದು ಈ ಭೂಮಿಯಲ್ಲಿ ಶಾಂತಿ ನೆಲೆಸಲು ಮಹಾತ್ಮಾ ಗಾಂಧಿ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಇಂದಿಗೂ ಅದು ಪ್ರಭಾವ ಬೀರುತ್ತಿದೆ. ಈಗ ರಚನೆಯಾಗುತ್ತಿರುವ ಹೊಸ, ನ್ಯಾಯಯುತ ಮತ್ತು ಬಹುಶೃಂಗ ವಿಶ್ವ ವ್ಯವಸ್ಥೆಯ ಮಾರ್ಗವನ್ನೂ ತೋರಿಸಿದ್ದಾರೆ. ಸಮಾನತೆ, ಪರಸ್ಪರ ಗೌರವ ಮತ್ತು ಸಹಕಾರದ ಕುರಿತಾದ ಅವರ ಬೋಧನೆಗಳಲ್ಲಿ, ಭಾರತವು ಇಂದು ವಿಶ್ವದ ಜನರೊಂದಿಗೆ, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಈ ತತ್ವಗಳು ಮತ್ತು ಮೌಲ್ಯಗಳನ್ನು ಸಮರ್ಥಿಸುತ್ತದೆ. ರಷ್ಯಾ ಕೂಡ ಅದನ್ನೇ ಮಾಡುತ್ತದೆ’ ಎಂದು ಬರೆದಿದ್ದಾರೆ.
ಭಾರತ–ರಷ್ಯಾ ವಾರ್ಷಿಕ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಸಂಜೆ ದೆಹಲಿಗೆ ಬಂದಿರುವ ಪುಟಿನ್ ಅವರನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ್ದರು. ನಂತರ ಶಿಷ್ಟಾಚಾರವನ್ನು ಬದಿಗೊತ್ತಿ ಉಭಯನಾಯಕರು ಒಂದೇ ಕಾರಿನಲ್ಲಿ ಪ್ರಯಾಣ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.