ADVERTISEMENT

ರೈತ ಒಕ್ಕೂಟದಲ್ಲಿ ಒಡಕು: ಪ್ರತಿಭಟನೆಯಿಂದ ಹಿಂದೆ ಸರಿದ ಎರಡು ಸಂಘಟನೆಗಳು

‘ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನ್’ ಹಾಗೂ ‘ಭಾರತೀಯ ಕಿಸಾನ್ ಯೂನಿಯನ್’ ಬೆಂಬಲ ಹಿಂತೆಗೆತ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 12:16 IST
Last Updated 27 ಜನವರಿ 2021, 12:16 IST
ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನ್ ಮುಖ್ಯಸ್ಥ ವಿ.ಎಂ.ಸಿಂಗ್ – ಎಎನ್‌ಐ ಚಿತ್ರ
ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನ್ ಮುಖ್ಯಸ್ಥ ವಿ.ಎಂ.ಸಿಂಗ್ – ಎಎನ್‌ಐ ಚಿತ್ರ   

ನವದೆಹಲಿ: ಟ್ರ್ಯಾಕ್ಟರ್ ಪೆರೇಡ್ ವೇಳೆ ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಳಿಕ ರೈತ ಪ್ರತಿಭಟನೆ ತಿರುವು ಪಡೆದುಕೊಂಡಿದೆ. ರೈತ ಒಕ್ಕೂಟದಲ್ಲೇ ಒಡಕು ಮೂಡಿರುವುದು ತಿಳಿದುಬಂದಿದೆ.

ಈಗ ನಡೆಯುತ್ತಿರುವ ಪ್ರತಿಭಟನೆಯಿಂದ ಹಿಂದೆ ಸರಿದಿರುವುದಾಗಿ ‘ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನ್’ ಮತ್ತು ‘ಭಾರತೀಯ ಕಿಸಾನ್ ಯೂನಿಯನ್’ ಹೇಳಿವೆ.

ಯಾರ ಹಾದಿ ಬೇರೆಯದ್ದೇ ಆಗಿದೆಯೋ ಅಂತಹವರೊಂದಿಗೆ ನಾವು ಪ್ರತಿಭಟನೆಯಲ್ಲಿ ಮುಂದುವರಿಯಲಾಗದು. ಹೀಗಾಗಿ ಅವರಿಗೆ ಒಳಿತನ್ನು ಹಾರೈಸುತ್ತೇನೆ. ಆದರೆ, ನಾನು ಮತ್ತು ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನ್ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿದ್ದೇವೆ ಎಂದು ಸಂಘಟನೆಯ ಮುಖ್ಯಸ್ಥ ವಿ.ಎಂ.ಸಿಂಗ್ ಹೇಳಿರುವುದಾಗಿ ‘ಎಎನ್‌ಐ’ ಟ್ವೀಟ್ ಮಾಡಿದೆ.

ಕನಿಷ್ಠ ಬೆಂಬಲ ಬೆಲೆಯ ಖಾತರಿ ಸಿಗುವ ವರೆಗೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ. ಆದರೆ, ಈಗ ನಡೆಯುತ್ತಿರುವ ರೀತಿಯ ಪ್ರತಿಭಟನೆ ನಮ್ಮದಲ್ಲ. ಜನರನ್ನು ಹುತಾತ್ಮರನ್ನಾಗಿಸಲು ಅಥವಾ ಥಳಿಸಲು ನಾವಿಲ್ಲಿಗೆ ಬಂದಿಲ್ಲ ಎಂದು ವಿ.ಎಂ.ಸಿಂಗ್ ಹೇಳಿದ್ದಾರೆ.

ಈ ಮಧ್ಯೆ, ರೈತರ ಪ್ರತಿಭಟನೆಯು ಮಂಗಳವಾರ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ದೆಹಲಿಯ ಸಿಂಘು ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಮಂಗಳವಾರ ನಡೆದ ಟ್ರ್ಯಾಕ್ಟರ್ ರ್‍ಯಾಲಿ ವೇಳೆ ಕೆಂಪುಕೋಟೆ ಆವರಣಕ್ಕೆ ನುಗ್ಗಿದ ನೂರಾರು ಪ್ರತಿಭಟನಕಾರರು ಐತಿಹಾಸಿಕ ಕೆಂಪು ಕೋಟೆಯಲ್ಲಿ ಧಾರ್ಮಿಕ ಧ್ವಜವನ್ನೂ ಹಾರಿಸಿದ್ದರು. ರೈತರ ಒಂದು ಗುಂಪು ದೆಹಲಿಯ ಬೀದಿಗಳಲ್ಲಿ ದಾಂದಲೆ ನಡೆಸಿತ್ತು. ಬ್ಯಾರಿಕೇಡ್‌ಗಳನ್ನು ಕಿತ್ತು ಒಗೆದು ಪೊಲೀಸರ ಮೇಲೂ ಹಲ್ಲೆ ಮಾಡಿತ್ತು. ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಹಿಂಸಾಚಾರದಲ್ಲಿ 300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದು, ಈವರೆಗೆ 22 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.